ಆಶ್ರಯ ಮನೆ ಹಂಚಿಕೆಯಲ್ಲಿ ತಾರತಮ್ಯ: ಬಿಜೆಪಿ ಪ್ರತಿಭಟನೆ

Update: 2017-08-14 12:17 GMT

ತುಮಕೂರು. ಆ.14: ದಿಬ್ಬೂರಿನಲ್ಲಿ ಜನತಾ ಕಾಲೋನಿಯಲ್ಲಿ ರಾಜೀವ್‌ಗಾಂಧಿ ಆಶ್ರಯ ಯೋಜನೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 1200 ಮನೆಗಳನ್ನು ಮೂಲ ನಿವಾಸಿಗಳಿಗೆ ಅರ್ಹ ಜನಗಳಿಗೆ ನೀಡದೆ ಸ್ಥಳೀಯ ಶಾಸಕರು ತಾರತಮ್ಯವೆಸಗಿ ಬಹುತೇಕ ಆರ್ಥಿಕವಾಗಿ ಸಬಲವಾಗಿರುವ ಕುಟುಂಬಗಳಿಗೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ದಲಿತ ಸಮುದಾಯಕ್ಕೆ ಸೇರಿರುವ ಹಾಗೂ ಆಶ್ರಯ ನಿವೇಶನ ರಹಿತವಾಗಿ ಕೂಲಿಮಾಡಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳಿಗೆ ವಂಚಿಸಲಾಗಿದೆ. ರಸ್ತೆ ಬದಿಯಲ್ಲಿ ಗುಡಾರ ನಿರ್ಮಿಸಿಕೊಂಡು ಬದುಕನ್ನು ಸಾಗಿಸುತ್ತಿದ್ದ ಮತ್ತು ಅಮಾನಿಕೆರೆ ದಂಡೆಯಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕುತ್ತಿದ್ದ ಜನಗಳನ್ನು ಒಕ್ಕಲೆಬ್ಬಿಸಿ ಅವರಿಗೆ ಕನಿಷ್ಠ ಸೂರು ಕಲ್ಪಿಸದೆ ಅನ್ಯಾಯವೆಸಗಿರುವುದು ಅಕ್ಷಮ್ಯವಾದುದ್ದಾಗಿದ್ದು, ಕೇವಲ ಓಟಿನ ರಾಜಕಾರಣದಿಂದ ಒಂದು ಕೋಮಿಗೆ ಶಾಸಕರು ಹೆಚ್ಚು ಮನೆಗಳನ್ನು ನೀಡಿರುವುದು ತುಂಬಾ ಖಂಡನೀಯ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಫಲಾನುಭವಿಗಳಿಗೆ ನಿವೇಶನ ಪತ್ರ ನೀಡಲು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನದ ಜೊತೆಗೆ, ನ್ಯಾಯ ಸಿಗುವವರೆಗೂ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಜೋತಿ ಗಣೇಶ್ ತಿಳಿಸಿದರು.

ದಿಬ್ಬೂರಿನ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದ್ದು, ಆಶ್ರಯ ಮನೆ ಹಂಚಿಕೆಯಲ್ಲೂ ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ, ದಲಿತ ಸಮುದಾಯದವರಿಗೆ ತಾರತಮ್ಯ  ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಿರಾಶ್ರಿತರಾದ ಇವರಿಗೆ ನ್ಯಾಯ ಸಿಗುವವರೆಗೂ, ಆಶ್ರಯ ಮನೆ ಕಲ್ಪಿಸಿಕೊಡುವವರೆಗೂ ಇವರಿಗೆ ಬೆಂಬಲವಾಗಿ ನಿಂತು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆೆಪಿ ನಗರಾಧ್ಯಕ್ಷ ಸಿ.ಎನ್.ರಮೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಹೆಚ್.ಹನುಮಂತರಾಜು, ಪರಮೇಶ್, ಶ್ರೀನಿವಾಸ್, ಜ್ಯೋತಿ, ಪಾರ್ವತಮ್ಮ, ಉಮಾ, ಚಿಕ್ಕತಾಯಮ್ಮ, ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News