35ಎ ವಿಧಿ ಕುರಿತ ಅರ್ಜಿಗಳು ಸಂವಿಧಾನ ಪೀಠಕ್ಕೆ: ಸುಪ್ರೀಂ ಸುಳಿವು

Update: 2017-08-15 13:14 GMT

ಹೊಸದಿಲ್ಲಿ,ಆ.15: ಜಮ್ಮು-ಕಾಶ್ಮೀರದ ಪ್ರಜೆಗಳಿಗೆ ವಿಶೇಷ ಹಕ್ಕುಗಳನ್ನು ಒದಗಿಸಿರುವ ಸಂವಿಧಾನದ 35ಎ ವಿಧಿಗೆ ಸಂಬಂಧಿಸಿದ ಅರ್ಜಿಗಳನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವ ಸುಳಿವನ್ನು ಸರ್ವೋಚ್ಚ ನ್ಯಾಯಾಲಯವು ನೀಡಿದೆ.

ವಾಸ್ತವದಲ್ಲಿ ಈ ವಿಷಯವು ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಮಂಡನೆಯಾಗಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ, ಆದರೆ ಮೂವರು ಸದಸ್ಯರ ಪೀಠವು ಅದನ್ನು ನಿರ್ಧರಿಸಬೇಕಾಗಿದೆ. 35ಎ ವಿಧಿಯು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತಿದ್ದರೆ ಅಥವಾ ಸ್ಥಾಪಿತ ಪದ್ಧತಿಗೆ ಅಧಿಕಾರಾತೀತವಾಗಿದ್ದರೆ ಅದನ್ನು ಪಂಚ ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಬಹುದಾಗಿದೆ ಎಂದು 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಡಾ.ಚಾರು ವಾಲಿ ಖನ್ನಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎ.ಎಂ.ಖನ್ವಿಲ್ಕರ್ ಅವರ ಪೀಠವು ಹೇಳಿತು.

1954ರಲ್ಲಿ ರಾಷ್ಟ್ರಪತಿಗಳ ಆದೇಶದಂತೆ ಸಂವಿಧಾನದಲ್ಲಿ ಸೇರಿಸಲಾಗಿರುವ ಈ ವಿಧಿಯು ಜಮ್ಮು-ಕಾಶ್ಮೀರದ ಪ್ರಜೆಗಳಿಗೆ ವಿಶೇಷ ಹಕ್ಕುಗಳನ್ನು ನೀಡಿದೆ ಮತ್ತು ರಾಜ್ಯದ ಹೊರಗಿನ ವ್ಯಕ್ತಿಯನ್ನು ಮದುವೆಯಾಗುವ ಮಹಿಳೆಗೆ ಆಸ್ತಿ ಹಕ್ಕುಗಳನ್ನು ನಿರಾಕರಿಸಿದೆ.

35ಎ ವಿಧಿಯನ್ನು ಪ್ರಶ್ನಿಸಿ ದಿಲ್ಲಿಯ ಎನ್‌ಜಿಒ ‘ವಿ ದಿ ಸಿಟಿಜನ್ಸ್’ ಸಲ್ಲಿಸಿರುವ ಇಂತಹುದೇ ಅರ್ಜಿಯನ್ನು ಮೂವರು ಸದಸ್ಯರ ಪೀಠಕ್ಕೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಮೂವರು ಸದಸ್ಯರ ನ್ಯಾಯಪೀಠದೆದುರು ಆ.29ರಂದು ಪರಿಗಣನೆಗೆ ಬರಲಿರುವ ಬಾಕಿ ಉಳಿದಿರುವ ಅರ್ಜಿಯೊಂದಿಗೆ ಚಾರು ಅವರ ಅರ್ಜಿಯನ್ನು ಸೇರಿಸಬೇಕೆಂಬ ಅವರ ಮನವಿಯನ್ನು ನ್ಯಾಯಾಲಯವು ಒಪ್ಪಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News