ನೇಪಾಳ ಪ್ರವಾಹ: 6 ಮಿಲಿಯನ್ ಜನರು ಸಂಕಷ್ಟದಲ್ಲಿ

Update: 2017-08-15 13:33 GMT

ಕಠ್ಮಂಡು, ಆ.15: ನೇಪಾಳದಲ್ಲಿ ಮುಸಲಧಾರೆಯಾಗಿ ಸುರಿಯುತ್ತಿರುವ ಮಳೆಯಿಂದ ಭಾರೀ ಪ್ರವಾಹ ಮತ್ತು ವ್ಯಾಪಕ ಭೂಕುಸಿತದ ಪ್ರಕರಣಗಳು ಮುಂದುವರಿದಿದ್ದು ಮೃತಪಟ್ಟವರ ಸಂಖ್ಯೆ 115ಕ್ಕೇರಿದೆ. 40 ಮಂದಿ ನಾಪತ್ತೆಯಾಗಿದ್ದು 6 ಮಿಲಿಯಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ . 2,800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.

ಪ್ರವಾಹದಿಂದ ಸಂತ್ರಸ್ತರಾದವರನ್ನು ತಾತ್ಕಾಲಿಕ ಪರಿಹಾರ ಶಿಬಿರದಲ್ಲಿ ನೆಲೆಗೊಳಿಸಲಾಗಿದ್ದು ಇವರಿಗೆ ಪರಿಹಾರ ಸಾಮಾಗ್ರಿ ಹಾಗೂ ಆಹಾರ ವಸ್ತುಗಳನ್ನು ಪೂರೈಸಲು ಸಮಸ್ಯೆಯಾಗಿದೆ ಎಂದು ‘ಕಠ್ಮಂಡು ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.

  ಪ್ರವಾಹದಿಂದ ಉಂಟಾದ ಹಾನಿಯ ನಷ್ಟವನ್ನು ಅಂದಾಜಿಸಲು ಗೃಹ ಸಚಿವ ಜನಾರ್ದನ್ ಶರ್ಮ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. 12 ಸಚಿವಾಲಯಗಳ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಗೃಹ ಸಚಿವಾಲಯದ ವಕ್ತಾರ ರಾಮ್‌ಕೃಷ್ಣ ಸುಬೇದಿ ತಿಳಿಸಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 13 ಹೆಲಿಕಾಪ್ಟರ್, ಮೋಟಾರ್‌ಬೋಟ್‌ಗಳು, ರಬ್ಬರ್ ಬೋಟ್‌ಗಳು ಇತ್ಯಾದಿಗಳ ಮೂಲಕ ಶೋಧ ಕಾರ್ಯಾಚರಣೆ, ರಕ್ಷಣೆ ಮತ್ತು ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

 ನೇಪಾಳದ ಬಹುತೇಕ ಪ್ರದೇಶದ ಮೂಲಕ ಸಾಗಿ ಬಂದು ದಕ್ಷಿಣ ಬಯಲುಪ್ರದೇಶದತ್ತ ಹರಿಯುವ ರಾಪ್ತಿ ನದಿ ಪ್ರವಾಹದಿಂದ ತುಂಬಿ ಹರಿಯುತ್ತಿದ್ದು ನದಿಪಾತ್ರದಲ್ಲಿರುವ ಮನೆ, ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾಗಿರುವ ಕೇಂದ್ರ ಚಿಟ್ವಾನ್ ಕಣಿವೆ ಕೂಡಾ ನೆರೆಪೀಡಿತವಾಗಿದೆ. ಚಿಟ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ವಿದೇಶಿ ಪ್ರವಾಸಿಗರೂ ಸೇರಿದಂತೆ ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಇಲ್ಲಿ ಸಿಕ್ಕಿಹಾಕಿಕೊಂಡಿದ್ದ 35 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ದೂತಾವಾಸ ತಿಳಿಸಿದೆ. ನೇಪಾಳದಾದ್ಯಂತ 27 ಜಿಲ್ಲೆಗಳು ಪ್ರವಾಹಪೀಡಿತವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News