ರೋಹಿತ್ ವೆಮುಲಾ ಆತ್ಮಹತ್ಯೆಗೆ ವಿವಿ ಕಾರಣವಲ್ಲ ಎಂದ ಆಯೋಗ!

Update: 2017-08-16 03:56 GMT

ಹೊಸದಿಲ್ಲಿ, ಆ. 16: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆಗೆ, ಅವರನ್ನು ವಿಶ್ವವಿದ್ಯಾನಿಲಯ ಹಾಸ್ಟೆಲ್‌ನಿಂದ ವಜಾಗೊಳಿಸಿರುವುದು ಕಾರಣವಲ್ಲ. ಸ್ವಂತ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವಿಚಾರಣಾ ಆಯೋಗ ವರದಿ ನೀಡಿದೆ.

ಸಮಿತಿ ವರದಿಯನ್ನು ಮಂಗಳವಾರ ಬಹಿರಂಗಪಡಿಸಿದ್ದು, ವೆಮುಲಾಗೆ ಹಲವು ತೊಂದರೆಗಳಿದ್ದವು. ಹಲವು ಕಾರಣಗಳಿಗೆ ಆತನ ನೆಮ್ಮದಿ ಕೆಟ್ಟಿತ್ತು ಎಂದು ವರದಿ ಹೇಳಿದೆ.

'ಆತನ ಆತ್ಮಹತ್ಯೆ ಟಿಪ್ಪಣಿಯಲ್ಲೇ ಆತ್ಮಹತ್ಯೆಗೆ ವೈಯಕ್ತಿಕ ಸಮಸ್ಯೆಗಳು ಕಾರಣ. ಹೊರಜಗತ್ತಿನ ವ್ಯವಹಾರಗಳೇ ಆತನ ನೆಮ್ಮದಿ ಕೆಡಿಸಿವೆ ಎಂಬ ಸ್ಪಷ್ಟ ಉಲ್ಲೇಖವಿದೆ' ಎಂದು ವರದಿ ಹೇಳಿದೆ.

'ಆತನಿಗೆ ಹಲವು ಕಾರಣಗಳಿಗೆ ಭ್ರಮನಿರಸನವಾಗಿತ್ತು. ಬಾಲ್ಯದಿಂದಲೂ ತಾನು ಏಕಾಂಗಿ ಎಂದು ಆತ ಬರೆದಿದ್ದ. ಇದು ಕೂಡಾ ಆತನ ಹತಾಶೆಯನ್ನು ಅಭಿವ್ಯಕ್ತಪಡಿಸುತ್ತದೆ. ತನ್ನ ಆತ್ಮಹತ್ಯೆಗೆ ಕಾರಣ ಎಂದು ಆತ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ' ಎಂದು ವಿವರಿಸಿದೆ. ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ರೂಪನ್‌ವಾಲ್ ಅವರನ್ನು ಪ್ರಕರಣ ವಿಚಾರಣೆಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೇಮಕ ಮಾಡಿತ್ತು.

ವೆಮುಲಾ ಆತ್ಮಹತ್ಯೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅಥವಾ ಬಿಜೆಪಿ ಮುಖಂಡ ಬಂಡಾರು ದತ್ತಾತ್ರೇಯ ಕಾರಣ ಎನ್ನುವುದಕ್ಕೆ ಯಾವುದೇ ಸಕಾರಣಗಳಿಲ್ಲ ಎಂದು ವರದಿ ಹೇಳಿದೆ. ವೆಮುಲಾ ಆತ್ಮಹತ್ಯೆ ಪ್ರಕರಣ ಇಡೀ ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News