ಪಾಕ್ ರೋಗಿಗಳಿಗೆ ಸ್ವಾತಂತ್ರೋತ್ಸವದ ಉಡುಗೊರೆ ನೀಡಿದ ಸುಷ್ಮಾ ಸ್ವರಾಜ್

Update: 2017-08-16 07:41 GMT

ಹೊಸದಿಲ್ಲಿ, ಆ.16: ಭಾರತೀಯ ಸರಕಾರದಲ್ಲಿ ಬಾಕಿ ಇರುವ ಪಾಕಿಸ್ತಾನಿ ರೋಗಿಗಳ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲಾಗುವುದು ಎಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದಾರೆ. ಈ ಮೂಲಕ ಪಾಕ್ ರೋಗಿಗಳಿಗೆ ಭಾರತದ ಸ್ವಾತಂತ್ರೋತ್ಸವದ ಉಡುಗೊರೆ ನೀಡಿದ್ದಾರೆ.

ಪಾಕ್‌ನ ಮಾಜಿ ವಿದೇಶಾಂಗ ಸಚಿವ ಸರ್ತಾಜ್ ಅಝಿಝ್ ಭಾರತದ ಬೇಡಿಕೆಯಂತೆ ಶಿಫಾರಸು ಪತ್ರ ನೀಡದ ಕಾರಣ ಪಾಕಿಸ್ತಾನದ ರೋಗಿಗಳು ವೀಸಾಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದರು.

ಈ ವರ್ಷಾರಂಭದಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ನಿಂದ ಮರಣದಂಡನೆ ಶಿಕ್ಷೆಯ ತೀರ್ಪಿಗೆ ಗುರಿಯಾಗಿರುವ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ತಾಯಿಗೆ ವೀಸಾ ನೀಡುವಂತೆ ಸಚಿವೆ ಸುಶ್ಮಾ ಸ್ವರಾಜ್ ಪಾಕ್‌ನ ಅಝಿಝ್‌ಗೆ ಮನವಿ ಮಾಡಿದ್ದರು. ಆದರೆ, ಸುಶ್ಮಾರ ಮನವಿಯನ್ನು ಅಝಿಝ್ ತಿರಸ್ಕರಿಸಿದ್ದರು.

‘‘ಅಝಿಝ್ ತನ್ನದೇ ದೇಶದ ನಾಗರಿಕರಿಗೆ ಶಿಫಾರಸು ಪತ್ರ ನೀಡಲು ಏಕೆ ಹಿಂದೇಟು ಹಾಕುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಸ್ವಾತಂತ್ರೋತ್ಸವದ  ಸಂದರ್ಭದಲ್ಲಿ ಭಾರತ ಸರಕಾರದಲ್ಲಿ ಬಾಕಿ ಇರುವ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ’’ಎಂದು ಸುಶ್ಮಾ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಪ್ರಜೆಗಳು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುತ್ತಾರೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ತಿಂಗಳಿಗೆ 500 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಭಾರತದ ಪ್ರಜೆ ಕುಲ್‌ಭೂಷಣ್ ಜಾಧವ್‌ಗೆ ಮರಣದಂಡನೆ ತೀರ್ಪು ನೀಡಿದ ಬಳಿಕ ವೈದ್ಯಕೀಯ ವೀಸಾ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.

ಸುಶ್ಮಾ ಸ್ವರಾಜ್ ತನ್ನ ಬಳಿ ಸಹಾಯಕೋರಿ ಬರುವ ಪಾಕಿಸ್ತಾನಿ ರೋಗಿಗಳಿಗೆ ಹಲವು ಬಾರಿ ನೆರವು ನೀಡಿದ್ದಾರೆ. ಪಾಕ್‌ನ ಎರಡೂವರೆ ತಿಂಗಳ ಶಿಶು ಹೃದಯದ ರೋಗದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸುಶ್ಮಾ ನೆರವಿಗೆ ಮುಂದಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News