ಸಿದ್ದಾಪುರ: ಕಸ ವಿಲೇವಾರಿಗೆ ಜಾಗ ಕೋರಿ ತಹಶೀಲ್ದಾರರಿಗೆ ಮನವಿ

Update: 2017-08-16 10:37 GMT

ಸಿದ್ದಾಪುರ, ಆ.16: ಇತ್ತೀಚೆಗೆ ಘಟ್ಟದಳದಲ್ಲಿ ತೆರವುಗೊಳಿಸಿದ ಸರಕಾರಿ ಜಾಗದಲ್ಲಿ ಕಸ ವಿಲೇವಾರಿಗೆ ಸ್ಥಳ ಒದಗಿಸಿಕೊಡಬೇಕೆಂದು ಸಿದ್ದಾಪುರದ ಯುವ ಶಕ್ತಿ ವೇದಿಕೆ ವಿರಾಜಪೇಟೆ ತಹಶೀಲ್ದಾರರಿಗೆ ಮನವಿ ನೀಡಿದರು.

ಸಿದ್ದಾಪುರ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕಸದ ವಿಲೇವಾರಿಗೆ ಜಾಗವಿಲ್ಲದೆ ರಸ್ತೆ ಬದಿಯಲ್ಲಿಯೇ ರಾಶಿಗಟ್ಟಲೆ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ತೀವ್ರ ಸಮಸ್ಯೆಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಸಮೀಪದ ಘಟ್ಟದಳದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಾಗ ಒದಗಿಸಬೇಕೆಂದು ಯುವ ಶಕ್ತಿ ವೇದಿಕೆಯ ಪದಾಧಿಕಾರಿಗಳು ವಿರಾಜಪೇಟೆ ತಹಶೀಲ್ದಾರರಾದ ಗೋವಿಂದರಾಜು ಅವರಿಗೆ ಮನವಿ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಗೋವಿಂದರಾಜು, ಈಗಾಗಲೇ ಘಟ್ಟದಳದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಪೈಸಾರಿ ಜಾಗವನ್ನು ತೆರವುಗೊಳಿಸಿ, ಜಾಗವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಾಲ್ದಾರೆ ಹಾಗೂ ಸಿದ್ದಾಪುರ ಎರಡು ಗ್ರಾ.ಪಂ ಗಳಿಗೆ ಕಸದ ವಿಲೇವಾರಿಗೆ ಜಾಗ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಯುವ ಶಕ್ತಿ ವೇದಿಕೆಯ ಅಧ್ಯಕ್ಷ ರೆಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ, ಸಂಘಟನಾ ಕಾರ್ಯದರ್ಶಿ ಸತೀಶ್ ನಾರಾಯಣ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್, ಸರ್ವೆಯರ್ ನರಸಯ್ಯ ಹಾಗೂ ಸಿಬ್ಬಂಧಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News