ಡಿಎಸ್‍ಎಸ್ ಬಾಳೂರು ಹೋಬಳಿ ಮತ್ತು ಸುಂಕಸಾಲೆ ಗ್ರಾಮ ಶಾಖೆಗಳ ಉಧ್ಘಾಟನೆ

Update: 2017-08-16 11:18 GMT

ಕಳಸ, ಆ.16: ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯಗಳನ್ನು ಮೆಟ್ಟಿ ನಿಲ್ಲುವ ಉದ್ದೇಶದಿಂದ 42 ವರ್ಷಗಳ ಹಿಂದೆ ಶೋಷಿತರ ಪ್ರತಿನಿಧಿಯಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜನ್ಮ ತಾಳಿತು ಎಂದು ಡಿಎಸ್‍ಎಸ್ ಜಿಲ್ಲಾ ಸಂಚಾಲಕ ವಸಂತ್ ಕುಮಾರ್ ತಿಳಿಸಿದರು.

 ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಾಳೂರು ಹೋಬಳಿ ಮತ್ತು ಸುಂಕಸಾಲೆ ಗ್ರಾಮ ಶಾಖೆಯನ್ನು ಸುಂಕಸಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ದಲಿತ ಚಿಂತಕರು, ಸಾಹಿತಿಗಳು, ನೌಕರರು ಮತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಘಟನೆ ದಲಿತರಲ್ಲಿ ಅನ್ಯಾಯ ಪ್ರತಿಭಟಿಸುವ ಸಂವಿದಾನಿಕ ಹಕ್ಕು, ಸೌಲಭ್ಯಗಳನ್ನು ಕೇಳುವ ದೈರ್ಯ ತುಂಬಿದೆ. ಸಂಘಟನೆಯ ಹೋರಾಟದಿಂದ ಸಾಮಾಜಿಕ ಅನಿಷ್ಠ ಬೆತ್ತಲೆ ಸೇವೆಯನ್ನು ನಿಷೇಧಿಸಲಾಗಿದೆ. ‘ಹಣ, ಹೆಂಡ ನಿಲ್ಲಿಸಿ ವಸತಿ ಶಾಲೆ ಕೊಡಿ’ ಎಂಬ ಘೋಷಣೆಗೆ ಪ್ರತಿಫಲ ಸಿಕ್ಕಿದೆ.

 50/100 ಜನರಿಂದ ಆಚರಣೆಯಾಗುತ್ತಿದ್ದ ಅಂಬೇಡ್ಕರ್ ಜಯಂತಿ ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವಂತಾಗಿದೆ. ಆದರೂ ಭೂಮಿ ಒಡೆತನ, ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹಾಗೂ ದಲಿತರಿಗೆ ಸ್ಮಶಾನ, ನಿವೇಶನ ಮತ್ತು ವಸತಿಯಂತಹ ಮೂಲಭೂತ ಸಮಸ್ಯೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಇಂದಿಗೂ ದ.ಸಂ.ಸ.ದ ಅವಶ್ಯಕತೆ ಇದೆ ಎಂದರು.

 ಜಿಲ್ಲಾ ಸಮಿತಿ ಸದಸ್ಯ ವಿ.ಧಮೇಶ್ ಮಾತನಾಡಿ, ದಲಿತರು ಕುಲಕಸಬಿಗೆ ಅಂಟಿಕೊಳ್ಳದೇ ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿದು ಸರ್ಕಾರದ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚು ದುಡಿಮೆ ಮಾಡಿ ನಿಮ್ಮ ಜೀವನಕಿಂತ ನಿಮ್ಮ ಮಕ್ಕಳ ಜೀವನ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ನಗರವಾಸಿಗಳಾಗಿ ಹಾರ್ಡ್‍ವೇರ್ ಮತ್ತು ಸಾಪ್ಟ್ ವೇರ್‍ಗಳಲ್ಲಿ ನಮ್ಮ ಮುಕ್ಕಳು ಸಾಧನೆ ಮಾಡಬೇಕು ಎಂದು ಒತ್ತಾಯಿಸಿದರು.

 ಮೂಡಿಗೆರೆ ತಾಲ್ಲೂಕು ಸಂಘಟನಾ ಸಂಚಾಲಕ ಕೃಷ್ಣಮಾಗಲು ಅಧ್ಯಕ್ಷತೆ ವಹಿಸಿದ್ದರು. ಕಳಸ ಹೋಬಳಿ ಸಂಚಾಲಕರಾದ ಸುರೇಶ್ ಕೆ.ಸಿ. ಗಿರೀಶ್, ಜಾನಕಿ, ಸವಿತ, ಸುಮಂತ್, ಸತೀಶ್, ಚಂದ್ರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಾಳೂರು ಹೋಬಳಿ ಮತ್ತು ಸುಂಕಸಾಲೆ ಗ್ರಾಮ ಶಾಖೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಂಚಾಲಕರಾಗಿ  ಲಕ್ಷ್ಮಣ, ಸಂಘಟನಾ ಸಂಚಾಲಕರಾಗಿ ಸುಧಾಕರ್, ಖಜಾಂಚಿ ಶೈಲೇಂದ್ರ, ಮಹಿಳಾ ಒಕ್ಕೂಟದ ಸಂಚಾಲಕಿಯಾಗಿ ಸುಮಾ ಆಯ್ಕೆಯಾದರು.

ಸುಂಕಸಾಲೆ ಗ್ರಾಮ ಶಾಖೆ: ಸಂಚಾಲಕರಾಗಿ ಹರೀಶ್, ಸುಧಾಕರ್, ಸಂಘಟನಾ ಸಂಚಾಲಕರಾಗಿ ಅಣ್ಣಪ್ಪ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News