ಸಿ. ಸಿ. ಕ್ಯಾಮರಾ ಕಣ್ಗಾವಲಿನಲ್ಲಿ ಶಿವಮೊಗ್ಗದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಚೇರಿ!

Update: 2017-08-16 12:12 GMT

ಶಿವಮೊಗ್ಗ, ಆ. 16: ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿರುವ ಅಲ್ಪಸಂಖ್ಯಾತ ಇಲಾಖೆ ಕಚೇರಿ ಆವರಣದ ಪ್ರತಿಯೊಂದು ವಿಭಾಗಕ್ಕೂ ಸಿ. ಸಿ. ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಈ ಮೂಲಕ ಕಚೇರಿಯ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಅಧಿಕಾರಿ ವರ್ಗ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.

ಕಚೇರಿ ಪ್ರವೇಶ ದ್ವಾರ, ಸಭಾಂಗಣ, ಒಳಾಂಗಣ ಹಾಗೂ ಇಲಾಖೆಯ ಜಿಲ್ಲಾ ಅಧಿಕಾರಿ ಕುಳಿತುಕೊಳ್ಳುವ ಕೊಠಡಿಯಲ್ಲಿಯೂ ಸಿ. ಸಿ. ಕ್ಯಾಮರಾ ಅಳವಡಿಸಲಾಗಿದೆ. ಕ್ಯಾಮರಾಗಳಲ್ಲಿ ದಾಖಲಾಗುವ ದೃಶ್ಯಾವಳಿಯನ್ನು ಎಲ್‍ಸಿಡಿ ಮಾನಿಟರ್‍ನಲ್ಲಿ ನೇರವಾಗಿ ವೀಕ್ಷಿಸುವ ವ್ಯವಸ್ಥೆ ಕೂಡ ಮಾಡಲಾಗಿರುವುದು ವಿಶೇಷವಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಾರ್ಯಬಾಹುಳ್ಯ ಹೊಂದಿರುವ ಅಲ್ಪಸಂಖ್ಯಾತ ಇಲಾಖೆ ಕಚೇರಿಗೆ ಸ್ವಂತ ಕಟ್ಟಡವಿರಲಿಲ್ಲ. ಕಳೆದ ವರ್ಷ ಜಿ.ಪ. ಕಚೇರಿ ಕಟ್ಟಡಕ್ಕೆ ಅಲ್ಪಸಂಖ್ಯಾತ ಇಲಾಖೆ ಕಚೇರಿ ವರ್ಗಾವಣೆ ಮಾಡಲಾಗಿತ್ತು. ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನಿಯೋಜನೆಗೊಂಡ ಟಿ. ಧರ್ಮಪ್ಪರವರು ಸುಸಜ್ಜಿತವಾಗಿ ಕಚೇರಿ ಆವರಣ ಸಜ್ಜುಗೊಳಿಸಿದ್ದಾರೆ. ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಹಲವು ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದ್ದಾರೆ.

'ಪ್ರತಿನಿತ್ಯ ಸರ್ಕಾರದ ಸೌಲಭ್ಯ ಪಡೆಯಲು, ನಾನಾ ಕೆಲಸ ಕಾರ್ಯಗಳ ನಿಮಿತ್ತ ಅಲ್ಪಸಂಖ್ಯಾತ ಸಮುದಾಯದ ನಾಗರೀಕರು, ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅವರಿಗೆ ಕಾಲಮಿತಿಯಲ್ಲಿ ಸೌಲಭ್ಯ ದೊರಕಿಸುವ ಕೆಲಸ ಮಾಡಬೇಕು, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು, ಕಚೇರಿ ಸಿಬ್ಬಂದಿಗಳ ಕಾರ್ಯನಿರ್ವಹಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಯಾವುದೇ ಗೊಂದಲ - ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸುವ ಉದ್ದೇಶದಿಂದ ಇಲಾಖೆಯ ಜಿಲ್ಲಾ ಅಧಿಕಾರಿ ಟಿ. ಧರ್ಮಪ್ಪರವರು ಕಚೇರಿಯ ಪ್ರತಿಯೊಂದು ವಿಭಾಗಕ್ಕೂ ಸಿ. ಸಿ. ಕ್ಯಾಮರಾ ಕಣ್ಗಾವಲು ಹಾಕಿದ್ದಾರೆ' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಕಚೇರಿ ಸಿಬ್ಬಂದಿಯೋರ್ವರು ಮಾಹಿತಿ ನೀಡುತ್ತಾರೆ.

'ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಕಡ್ಡಾಯವಾಗಿ ಸಿ. ಸಿ. ಕ್ಯಾಮರಾ ಅಳವಡಿಸಬೇಕು. ಈ ಮೂಲಕ ಸಿಬ್ಬಂದಿಗಳ ಕಾರ್ಯನಿರ್ವಹಣೆಯಲ್ಲಿ ದಕ್ಷತೆ ಕಾಯ್ದುಕೊಳ್ಳುವ ಹಾಗೂ ನಾಗರೀಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತಹ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು' ಎಂದು ನಾಗರೀಕ ಹನೀಫ್ ಎಂಬುವರು ಸಲಹೆ ನೀಡುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News