ವಿವಾದಕ್ಕೆಡೆ ಮಾಡಿಕೊಟ್ಟ ಬಯಲು ಶೌಚಮುಕ್ತ ಜಿಲ್ಲೆ ಘೋಷಣೆ !

Update: 2017-08-16 12:15 GMT

ಶಿವಮೊಗ್ಗ, ಆ. 16: ಶಿವಮೊಗ್ಗ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಲು ಜಿಲ್ಲಾ ಪಂಚಾಯತ್ ಆಡಳಿತ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಕ್ರಮಗಳನ್ನು ಮಾಡಿಕೊಂಡಿದ್ದು, ಅದಿಕೃತ ಘೋಷಣೆಯಷ್ಟೆ ಬಾಕಿ ಉಳಿದಿದೆ. ಆದರೆ ಬಯಲು ಶೌಚ ಮುಕ್ತ ಜಿಲ್ಲೆ ಘೋಷಣೆ ವಿಷಯವು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಜಿಲ್ಲಾ ಪಂಚಾಯತ್ ಆಡಳಿತ ತರಾತುರಿ ನಿರ್ಧಾರ ಕೈಗೊಳ್ಳಬಾರದೆಂಬ ಒತ್ತಡ ಕೂಡ ಸಾರ್ವಜನಿಕ ವಲಯದಿಂದ ವ್ಯಕ್ತವಾಗಲಾರಂಭಿಸಿದೆ.

ಜಿಲ್ಲೆಯ ಏಳು ತಾಲೂಕುಗಳ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿ ಶೌಚಾಲಯಗಳ ನಿರ್ಮಾಣವಾಗಿಲ್ಲ. ಬಯಲು ಶೌಚಕ್ಕೆ ಕಡಿವಾಣ ಬಿದ್ದಿಲ್ಲ. ಆದರೆ ಅಂಕಿಅಂಶಗಳ ಆಧಾರದ ಮೇಲೆ ಅಧಿಕಾರಿಗಳು ಜಿಲ್ಲೆಯನ್ನು ಬಯಲು ಶೌಚಮುಕ್ತ ಘೋಷಣೆಗೆ ಮುಂದಾಗಿರುವುದು ನಿಜಕ್ಕೂ ಖಂಡನಾರ್ಹವಾದುದಾಗಿದ್ದು, ಹಾಸ್ಯಾಸ್ಪದ ಸಂಗತಿಯಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳು ಏಕೀಷ್ಟು ಗಡಿಬಿಡಿ ಮಾಡುತ್ತಿದ್ದಾರೆ ಎಂಬುವುದೆ ಗೊತ್ತಾಗುತ್ತಿಲ್ಲ. ಇದರ ಹಿಂದಿರುವ ಹಿತಾಸಕ್ತಿ ಏನು? ಎಂಬುವುದು ಗೊತ್ತಾಗುತ್ತಿಲ್ಲ ಎಂದು ಕೆಲ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶೇ. 100 ರಷ್ಟು ಶೌಚಾಲಯ ನಿರ್ಮಾಣವಾಗಿದ್ದು, ಎಲ್ಲಿಯೂ ಬಯಲು ಶೌಚ ನಡೆಯುತ್ತಿಲ್ಲ ಎಂದು ಅಧಿಕಾರಿಗಳು ನೀಡುತ್ತಿರುವ ಅಂಕಿಅಂಶಗಳು ಸತ್ಯಕ್ಕೆ ದೂರವಾದುದಾಗಿದೆ. ಅದೆಷ್ಟೊ ಮನೆಗಳಲ್ಲಿ ಇಲ್ಲಿಯವರೆಗೂ ಸ್ವಂತ ಶೌಚಾಲಯವಿಲ್ಲವಾಗಿದೆ. ಶೌಚಾಲಯ ಕೋರಿ ಸ್ಥಳೀಯ ಆಡಳಿತಗಳಿಗೆ ಅರ್ಜಿ ಸಲ್ಲಿಸಿದರೆ ಮಂಜೂರು ಮಾಡುತ್ತಿಲ್ಲ. ಅನುದಾನ ಇಲ್ಲವಾಗಿದೆ ಎಂದು ಹೇಳುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಈಗಿರುವಾಗ ಹೇಗೆ ಅಧಿಕಾರಿಗಳು ಜಿಲ್ಲೆಯಲ್ಲಿ ಶೇ. 100 ರಷ್ಟು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ವರದಿ ಸಿದ್ದಪಡಿಸಿದ್ದಾರೆ ಎಂದು ಗ್ರಾಮೀಣ ಭಾಗದ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯನ್ನು ಒಮ್ಮೆ ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುವುದಿಲ್ಲವೆಂಬ ಮಾಹಿತಿಯೂ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮುನ್ನ ತಾಲೂಕು ವ್ಯಾಪ್ತಿಗಳಲ್ಲಿ ಮತ್ತೊಮ್ಮೆ ಶೌಚಾಲಯಗಳ ಸಮೀಕ್ಷೆ ನಡೆಸಬೇಕು.

ತಾಲೂಕುವಾರು ತಂಡಗಳನ್ನು ರಚಿಸಬೇಕು. ಇದರಲ್ಲಿ ಆಯಾ ತಾಲೂಕುಗಳ ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಇದರಿಂದ ಶೌಚಾಲಯಗಳ ನಿರ್ಮಾಣದ ವಾಸ್ತವ ಸ್ಥಿತಿಗತಿಯ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂಬುವುದು ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.

ಪ್ರಸ್ತುತ ಗ್ರಾ.ಪಂ. ಆಡಳಿತದಿಂದ ಶೌಚಾಲಯ ಮಂಜೂರಾಗಿರುವ ಕಡೆಗಳಲ್ಲಿಯೂ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಅರ್ಧಂಬರ್ಧ ನಡೆದಿದೆ. ಕೆಲವೆಡೆ ಶೌಚಾಲಯ ಕಟ್ಟಡಗಳಿಗೆ ಬಾಗಿಲು ಇಲ್ಲವಾಗಿದ್ದರೆ, ಮತ್ತೆ ಕೆಲವೆಡೆ ಬೇಸಿನ್, ಪ್ಲಬಿಂಗ್ ಕೆಲಸವೇ ನಡೆದಿಲ್ಲ. ಇನ್ನೂ ಕೆಲವೆಡೆ ಶೌಚ ಗುಂಡಿಗಳನ್ನೇ ಮುಚ್ಚಿಲ್ಲದಿರುವುದು ಕಂಡುಬರುತ್ತದೆ.

ಘೋಷಿಸಬಾರದು: ಜಿಲ್ಲೆಯನ್ನು ಶೇ. 100 ರಷ್ಟು ಬಯಲು ಶೌಚ ಮುಕ್ತ ಜಿಲ್ಲೆ ಎಂಬ ಘೋಷಣೆ ಮಾಡುವುದು ಸಂಪೂರ್ಣ ಅವಾಸ್ತವಿಕವಾಗಿದೆ. ಸದ್ಯದ ಮಟ್ಟಿಗೆ ಯಾವುದೇ ಕಾರಣಕ್ಕೂ ಜಿ.ಪಂ ಆಡಳಿತ ಈ ಘೋಷಣೆ ಮಾಡಬಾರದು. ಎಲ್ಲರಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಿದ ನಂತರವೇ ಈ ಘೋಷಣೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಒಟ್ಟಾರೆ ಬಯಲು ಶೌಚ ಮುಕ್ತ ಜಿಲ್ಲೆ ಘೋಷಣೆ ಮಾಡುವ ಜಿ.ಪಂ. ಆಡಳಿತದ ಪ್ರಸ್ತಾಪವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಮನೆಗಳಲ್ಲಿಯೂ ಇಲ್ಲಿಯವರೆಗೂ ಶೌಚಾಲಯ ವ್ಯವಸ್ಥೆ ಕಲ್ಪಿಸದೆ ಬಯಲು ಶೌಚ ಮುಕ್ತ ಜಿಲ್ಲೆ ಘೋಷಣೆ ಎಷ್ಟು ಸಮಂಜಸ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿರುವುದಂತೂ ಸತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News