ಹಾಸ್ಟೆಲ್ ಕೊಠಡಿ ಹಾಳುಗೆಡವಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ನೋಟೀಸ್ ನೀಡಲು ಜಿಲ್ಲಾಧಿಕಾರಿ ಸೂಚನೆ

Update: 2017-08-16 12:17 GMT

ಶಿವಮೊಗ್ಗ, ಆ. 16: ನಗರದ ಬಾಪೂಜಿ ನಗರದಲ್ಲಿರುವ ಪ್ರೊ. ಬಿ. ಕೃಷ್ಣಪ್ಪ ಸರ್ಕಾರಿ ಹಾಸ್ಟೆಲ್‍ಗೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‍ರವರು ಬುಧವಾರ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ವೇಳೆ ಹಾಸ್ಟೆಲ್ ಕೊಠಡಿಗಳಿಗೆ ಇತ್ತೀಚೆಗೆ ಬಳಿದಿದ್ದ ಪೈಟಿಂಗ್ ಹಾಳುಗೆಡವಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ನೋಟೀಸ್ ಜಾರಿಗೊಳಿಸುವಂತೆ ನಿಲಯ ಪಾಲಕರಿಗೆ ಆದೇಶಿಸಿದ್ದಾರೆ.

ವಿದ್ಯಾರ್ಥಿ ನಿಲಯಕ್ಕೆ ಹೊರಗಿನ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಕರೆತರುವುದು, ಹಾಸ್ಟೆಲ್ ಸಾಮಗ್ರಿಗಳನ್ನು ಹಾಳು ಮಾಡುವುದು, ಅಶಿಸ್ತಿನಿಂದ ವರ್ತಿಸುವ ವಿದ್ಯಾರ್ಥಿಗಳನ್ನು ನಿರ್ಧಾಕ್ಷಿಣ್ಯವಾಗಿ ವಿದ್ಯಾರ್ಥಿ ನಿಲಯದಿಂದ ಹೊರ ಹಾಕುವಂತೆ ವಾರ್ಡನ್‍ಗೆ ಸೂಚಿಸಿದ್ದಾರೆ.

ಹಾಸ್ಟೆಲ್‍ನಲ್ಲಿ ಶಿಸ್ತು ಕಾಪಾಡುವುದು, ವಿದ್ಯಾರ್ಥಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು, ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗುವ ವಾರ್ಡನ್‍ಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳ ಕೊಠಡಿಗಳಿಗೆ ಭೇಟಿ ನೀಡಿದ್ದ ವೇಳೆ ಕೆಲ ಕೊಠಡಿಗಳಲ್ಲಿ ಸೀಮೆಎಣ್ಣೆ ಸ್ಟೌವ್, ಗ್ಯಾಸ್ ಸ್ಟೌವ್ ಸೇರಿದಂತೆ ಮತ್ತಿತರ ಅಡುಗೆ ಪರಿಕರಗಳಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತು. ಇವುಗಳನ್ನು ಜಪ್ತಿ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್‍ಗೆ ತಿಳಿಸಿದ್ದಾರೆ.

ಪರಿಶೀಲನೆ: ಕಾಲೇಜ್‍ಗೆ ಹೋಗುವ ಸಮಯದಲ್ಲಿ ಕೆಲ ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಗಳಲ್ಲಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಈ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಕಾಲೇಜ್‍ನ ಹಾಜರಾತಿ ಪುಸ್ತಕದ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಿ ತಮಗೆ ವರದಿ ನೀಡುವಂತೆ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News