ಕಲ್ಲು ಗಣಿ ಮಾಫಿಯಾದಿಂದ ಹೋರಾಟಗಾರನ ಮೇಲೆ ಹಲ್ಲೆ : ಸೂಕ್ತ ರಕ್ಷಣೆಗೆ ಆಗ್ರಹಿಸಿ ಜನ ಸಂಗ್ರಾಮ ಪರಿಷತ್‍ನಿಂದ ಧರಣಿ

Update: 2017-08-16 12:21 GMT

ಶಿವಮೊಗ್ಗ, ಆ. 16: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಹೊಸನಗರದ ಬ್ರಹ್ಮೇಶ್ವರ ಗ್ರಾಮದ ಗಿರೀಶ್ ಎಂಬ ಹೋರಾಟಗಾರನ ಮೇಲೆ ಕಲ್ಲು ಗಣಿ ಮಾಫಿಯಾವು ಸುಳ್ಳು ದೂರು ದಾಖಲಿಸಿದೆ. ಜೊತೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜನ ಸಂಗ್ರಾಮ ಪರಿಷತ್ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಪತ್ರ ಅರ್ಪಿಸಿದರು.

ಪುಣಜೆ ಗ್ರಾಮದ ಸರ್ವೆ ನಂ. 39 ರಲ್ಲಿ ವ್ಯಕ್ತಿಯೋರ್ವರು ನಾಲ್ಕು ಎಕರೆ ಕಾಡು ನಾಶಗೊಳಿಸಿ, ಅಡಕೆ ತೋಟ ಮಾಡಲು ಮುಂದಾಗಿದ್ದರು. ಈ ವೇಳೆ ಗಿರೀಶ್ ನೀಡಿದ್ದ ದೂರಿನ ಆಧಾರದ ಮೇಲೆ ಕಾಡು ನಾಶಗೊಳಿಸಿದ್ದ ವ್ಯಕ್ತಿಯ ವಿರುದ್ದ ದೂರು ದಾಖಲಾಗಿತ್ತು. ಈ ಪ್ರಕರಣದ ನಂತರ ಗಿರೀಶ್ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಎಲ್ಲೆಂದರಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಪರಿಸರ ನಾಶ ಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಗಿರೀಶ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಅಕ್ರಮ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡ ದಂಧೆಕೋರರು ಗಿರೀಶ್‍ರವರಿಗೆ ಪ್ರಾಣ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ.

ಜುಲೈ 17 ರಂದು ಗಿರೀಶ್ ಅವರ ಜೀವ ತೆಗೆಯುವ ಹುನ್ನಾರ ನಡೆದಿದೆ. ಈ ಕುರಿತಂತೆ ಹೊಸನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ ಆ.10 ರಂದು ಗಿರೀಶ್‍ರವರ ಮೇಲೆ ಕೆಲವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಗಿರೀಶ್ ಮೇಲೆ ದಾಖಲಿಸಿರುವ ಸುಳ್ಳು ಎಫ್‍ಐಆರ್ ರದ್ದುಗೊಳಿಸಬೇಕು. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಅವರ ಹೋರಾಟವನ್ನು ಹತ್ತಿಕ್ಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆಯುತ್ತಿರುವವರ ವಿರುದ್ದ ಗಿರೀಶ್ ಸಮರ ಸಾರಿದ್ದು, ಅವರಿಗೆ ಬೆಂಬಲ ನೀಡುವುದರ ಮೂಲಕ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಜನ ಸಂಗ್ರಾಮ ಪರಿಷತ್ ಜಿಲ್ಲಾ ಮುಖಂಡ ವಾಮದೇವಗೌಡ, ಗಿರೀಶ್, ಕೆ.ಟಿ. ರಮೇಶ್, ಹರೀಶ್, ಪ್ರಕಾಶ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News