ಶಿಕಾರಿಪುರ : 7 ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ

Update: 2017-08-16 12:37 GMT

ಶಿಕಾರಿಪುರ,ಆ.16: ಕೇಂದ್ರ ಸರ್ಕಾರ ನೌಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು,ಕಮಲೇಶ ಚಂದ್ರ ಆಯೋಗ ವರದಿ ಸಲ್ಲಿಸಿ ಹಲವು ತಿಂಗಳಾದರೂ ಇಂದಿಗೂ 7 ನೇ ವೇತನ ಆಯೋಗ ಜಾರಿಗೊಳಿಸದೆ ಗ್ರಾಮೀಣ ಅಂಚೆ ಸೇವಕರನ್ನು ಜೀತದಾಳುಗಳ ರೀತಿ ದುಡಿಸಿಕೊಂಡು ವಂಚಿಸಲಾಗುತ್ತಿದೆ ಎಂದು ತಾಲೂಕು ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ಪರಶುರಾಮಪ್ಪ ಆರೋಪಿಸಿದರು.

  7 ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕರೆಯ ಮೇರೆಗೆ ಪಟ್ಟಣದ ಪ್ರಧಾನ ಅಂಚೆ ಕಚೇರಿ ಮುಂಭಾಗ ಬುಧವಾರ ಆರಂಭವಾದ ಗ್ರಾಮೀಣ ಅಂಚೆ ಸೇವಕರ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಅವರು ಮಾತನಾಡಿದರು.

   ಅಂಚೆ ಇಲಾಖೆ ಆರಂಭವಾಗಿ 15 ದಶಕವಾಗಿದ್ದು ಇಂದಿಗೂ ಇಲಾಖೆಯಲ್ಲಿ ಗ್ರಾಮೀಣ ಅಂಚೆ ನೌಕರರನ್ನು ಜೀತಪದ್ದತಿಗಿಂತ ನಿಕೃಷ್ಟವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದ ಅವರು ಸ್ವಾತಂತ್ರ ಸಮಾನತೆ ಇಲಾಖೆಯಲ್ಲಿ ಕನಸಾಗಿದ್ದು,ಇಲಾಖೆಯ ಆದಾಯದಲ್ಲಿನ ಸಿಂಹಪಾಲಿಗೆ ಕಾರಣರಾದ ಗ್ರಾಮೀಣ ಅಂಚೆ ನೌಕರರು 30-40 ವರ್ಷಗಳಿಂದ ಸತತ ಸೇವೆ ಸಲ್ಲಿಸಿ ಸೌಲಭ್ಯಗಳಿಲ್ಲದೆ ನಿವೃತ್ತರಾಗುತ್ತಿದ್ದಾರೆ.ಪ್ರತಿ ಬ್ರಾಂಚ್ ಪೋಸ್ಟ್ ಆಫೀಸ್ ವ್ಯಾಪ್ತಿಗೆ 10 ರಿಂದ 15 ಹಳ್ಳಿಗಳಿದ್ದು ನಿತ್ಯ ಕಾಗದ ಪತ್ರ,ಪಾರ್ಸಲ್,ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್,ಮನಿ ಆರ್ಡರ್ ಗಳನ್ನು 20-30 ಕಿ.ಮೀ ಅಲೆದಾಡಿ ತಲುಪಿಸಬೇಕಾಗಿದೆ.ಇತ್ತೀಚೆಗೆ ಪರಿಚಯಿಸಲಾದ ಗ್ರಾಮೀಣ ಜೀವವಿಮೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಖಾತೆಗಳು ಹೆಚ್ಚಾಗಿ ಸಾವಿರಾರು ಕೋಟಿ ಸಂಪನ್ಮೂಲ ಕ್ರೋಡೀಕರಿಸಲಾಗಿದ್ದು ನಿತ್ಯ 8 ರಿಂದ 10 ಗಂಟೆ ಸೇವೆಸಲ್ಲಿಸುತ್ತಿರುವ ನೌಕರರು ಮಾತ್ರ ಸೌಲಭ್ಯ,ಸೇವಾಭದ್ರತೆಯಿಲ್ಲದೆ ನಿವೃತ್ತರಾಗುತ್ತಿರುವುದು ಮಾತ್ರ ವಿಪರ್ಯಾಸ ಎಂದರು.

   ರಾಜ್ಯ ಸರ್ಕಾರಿ ನೌಕರರು,ದಿನಗೂಲಿ ನೌಕರರು,ಪೌರಕಾರ್ಮಿಕರ ಸಹಿತ ಹಲವರ ಸೇವೆ ಖಾಯಂಗೊಳಿಸಲಾಗಿದ್ದು ಗ್ರಾಮೀಣ ಅಂಚೆ ನೌಕರರು ಮಾತ್ರ ಈ ದಿಸೆಯಲ್ಲಿ ಹಿಂದುಳಿದಿದ್ದಾರೆ ನೌಕರರು ಅರ್ಹ ಸೌಲಭ್ಯವನ್ನು ಪಡೆಯಲು ಸಂಘಟನಾತ್ಮಕ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ ಅವರು ಕಮಲೇಶ ಚಂದ್ರ ಆಯೋಗದ ವರದಿಗೆ ಸಂಘದ ಸೂಕ್ತ ಸಲಹೆ ಬದಲಾವಣೆಯ ಮೂಲಕ ಜಾರಿಗೊಳಿಸಬೇಕು,ಬ್ರಾಂಚ್ ಪೋಸ್ಟ್ ಆಫೀಸ್‌ಗಳ ಅವಧಿ 8 ಗಂಟೆಗೆ ನಿಗದಿಗೊಳಿಸಿ ನೌಕರರನ್ನು ಖಾಯಂಗೊಳಿಸಬೇಕು,ದೆಹಲಿ ಹಾಗೂ ಮದ್ರಾಸ್ ಕ್ಯಾಟ್ ನ್ಯಾಯಾಲಯದ ಆದೇಶದನ್ವಯ ನೌಕರರಿಗೆ ನಿವೃತ್ತಿ ವೇತನ ನೀಡುವಂತೆ ಆಗ್ರಹಿಸಿದ ಅವರು ಟಾರ್ಗೆಟ್ ನೆಪದಲ್ಲಿ ನೌಕರರ ದೌರ್ಜನ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

   ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನಾಕಾರರು ಘೋಷಣೆ ಹಾಕಿದರು.ಈ ಸಂದರ್ಬದಲ್ಲಿ ಸಂಘದ ಕಾರ್ಯದರ್ಶಿ ಭೀಮರಾವ್ ಬೇಗೂರು,ಎಂ.ದೊರೈ,ಗಜಾನನ,ವೀರಪ್ಪ,ಪ್ರಭಾಕರ,ಸುಷ್ಮಾ,ಅಂಜಲಿ, ಶ್ವೇತಾ,ಮಂಜುನಾಥ,ಡಿ.ಬಸವರಾಜ,ಹನುಮಂತಪ್ಪ,ಸೋಮೋಜಿರಾವ್,ಜಿ.ಬಸವರಾಜ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News