ಮಡಿಕೇರಿ; ಗೌರಿ ಗಣೇಶೋತ್ಸವ : ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಕ್ರಮ

Update: 2017-08-16 12:43 GMT

ಮಡಿಕೇರಿ, ಆ.16 :ಕೊಡಗು ಜಿಲ್ಲೆಯಾದ್ಯಂತ ಗೌರಿ ಗಣೇಶೋತ್ಸವವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಶಾಂತಿ ಸೌಹಾರ್ದತೆಗಳಿಂದ ಆಚರಿಸಲು ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕ ಉತ್ಸವವಾಗಿ ಆಚರಿಸಲ್ಪಡುವ ಹಬ್ಬದ ಸಂದರ್ಭ ಅನುಸರಿಸಲೇಬೇಕಾದ ಕಾರ್ಯಸೂಚಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ್ದಾರೆ.

 ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ ಆ.25 ರಂದು ನಡೆಯಲಿರುವ ಗಣೇಶೋತ್ಸವ ಮತ್ತು ವಿಸರ್ಜನೋತ್ಸವಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿಗಳು ಮತ್ತು ಮಡಿಕೇರಿ ನಗರಸಭೆ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಭೆ ನಡೆಸಿ, ಉತ್ಸವಾಚರಣೆ ಸಂದರ್ಭ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.

 ಗೌರಿ ಗಣೇಶನ ಮೂರ್ತಿಗಳ ಪ್ರತಿಷ್ಟಾಪನೆಗೆ ಅಗತ್ಯವಾದ ಅನುಮತಿಯನ್ನು ನಿಗದಿತ ಸಮಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ನೀಡುವಂತೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನಗಳಂತೆ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನಷ್ಟೆ ಉತ್ಸವದಲ್ಲಿ ಬಳಸುವ ಮೂಲಕ ಪರಿಸರಕ್ಕೆ ಧಕ್ಕೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸ್ಪಷ್ಟಪಡಿಸಿದರು.

ಪೂರ್ವಾನುಮತಿ ಅಗತ್ಯ

 ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಸಾರ್ವಜನಿಕವಾಗಿ ಉತ್ಸವವನ್ನಾಚರಿಸುವವರು ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಅತ್ಯವಶ್ಯ. ಉತ್ಸವದ ಸಂದರ್ಭ ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡುವುದು ಸೇರಿದಂತೆ ಸಾರ್ವಜನಿಕರಿಗೆ ಬಲವಂತದ ‘ಚಂದಾ ವಸೂಲಿ’ಗೆ ಯಾವುದೇ ಕಾರಣಕ್ಕು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು.

 ‘ಡಿಜೆ’ಗೆ ಅವಕಾಶವಿಲ್ಲ 

 ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಡಿಜೆ ಧ್ವನಿವರ್ಧಕದ ಬಳಕೆಗೆ ಅವಕಾಶವಿಲ್ಲ. ಸೂಚಿತ ಮಿತಿಯಲ್ಲಿ ಧ್ವನಿವರ್ಧಕವನ್ನು ಅಗತ್ಯ ಅನುಮತಿಯೊಂದಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕೆಂದು ರಾಜೇಂದ್ರಪ್ರಸಾದ್ ತಿಳಿಸಿದರು.

 ಭದ್ರತೆಯ ದೃಷ್ಟಿಯಿಂದ ಪೆಂಡಾಲುಗಳಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮಗಳನ್ನು ದಾಖಲಿಸಿಕೊಳ್ಳಲು ಸಿಸಿ ಟಿವಿಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಉತ್ಸವಕ್ಕೆ ಸಂಬಂಧಪಟ್ಟ ಬ್ಯಾನರ್, ಬಂಟಿಂಗ್ಸ್‍ಗಳನ್ನು ಅಳವಡಿಸಲು ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಗೌರಿ ಗಣೇಶ ವಿಗ್ರಹ, ಶಾಮಿಯಾನ, ಪೆಂಡಾಲುಗಳನ್ನು ಕಾಯಲು ‘ಕಾವಲು ಸಮಿತಿ’ಗೆ ಸದಸ್ಯರನ್ನು ನೇಮಿಸಿಕೊಂಡು ಮುಂಜಾಗ್ರತೆ ವಹಿಸಬೇಕು. ಗೌರಿ ಗಣೇಶ ಮೂರ್ತಿಯ ಸುರಕ್ಷತೆ ಸಮಿತಿಯ ಜವಾಬ್ದಾರಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಯಾವುದೇ ಅವಘಡಗಳು ಸಂಭವಿಸಿದಲ್ಲಿ ಸಮಿತಿಯೆ ನೇರ ಹೊಣೆಯಾಗುತ್ತದೆ ಎಂದು ಎಸ್‍ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು.

ಈಜುಗಾರರಿಂದ ವಿಸರ್ಜನೆ

ಗೌರಿ ಗಣೇಶ ವಿಸರ್ಜನೆ ವೇಳೆ ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ಆಯಾ ಗೌರಿ ಗಣೇಶ ಸಮಿತಿ ನುರಿತ ಈಜುಗಾರರನ್ನು ನೇಮಿಸಿಕೊಳ್ಳಬೇಕು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಲೈಫ್ ಜಾಕೆಟ್‍ಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News