ಮನೆ ಕೆಲಸದವರನ್ನು ‘ಕಾರ್ಮಿಕರು’ ಎಂದು ಪರಿಗಣಿಸಲು ಆಗ್ರಹ

Update: 2017-08-16 12:47 GMT

ಬೆಂಗಳೂರು, ಆ.16: ಗೃಹ ಕಾರ್ಮಿಕರನ್ನು ಅಧಿಕೃತವಾಗಿ ಕಾರ್ಮಿಕರು ಎಂದು ಪರಿಗಣಿಸಬೇಕು ಹಾಗೂ ಅಸಂಘಟಿತ ಕಾರ್ಮಿಕರ ಮಸೂದೆ ಜಾರಿಗೊಳಿಸಿ, ಪ್ರತ್ಯೇಕ ಕಾರ್ಮಿಕರ ಮಂಡಳಿ ಮತ್ತು ಸಾಮಾಜಿಕ ಭದ್ರತೆ ನೀಡಬೇಕು ಎಂದು ಬೆಂಗಳೂರು ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಒತ್ತಾಯಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ಕಾಮಾಕ್ಷಿ, ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಮನೆ ಕೆಲಸ ಮಾಡುತ್ತಿರುವ ನೌಕರರಿದ್ದಾರೆ. ಅದರಲ್ಲಿಯೂ ಶೇ.92 ರಷ್ಟು ಮಹಿಳೆಯರಿದ್ದು, ಬಹುತೇಕರು ಸುರಕ್ಷಿತವಲ್ಲದೆ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.

ಗೃಹ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿಗೆ ಸರಿಯಾದ ವಿಶ್ರಾಂತಿ, ಊಟ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದಾರೆ. ಬಹುತೇಕ ಕಾರ್ಮಿಕರು ತಮ್ಮ ಮನೆ ಮಂದಿಯನ್ನು ತೊರೆದು ಮಾಲಕರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ವಲಸೆ ಬಂದಿರುವ ನೂರಾರು ಕಾರ್ಮಿಕರು ಗೃಹ ಕಾರ್ಮಿಕರಾಗಿ ಅಭದ್ರತೆಯಲ್ಲಿ ಜೀವನ ನಡೆಸುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗೃಹ ಕಾರ್ಮಿಕರು ಮನೆಗಳಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಶುಭ್ರಗೊಳಿಸುವುದು, ಅಡುಗೆ ಮಾಡುವುದು ಸೇರಿದಂತೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವವರೆಗೂ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಮಾಲಕರು ಮಾತ್ರ ಗೃಹ ಕಾರ್ಮಿಕರನ್ನು ಕೆಳದರ್ಜೆಯ ಜನರನ್ನಾಗಿ, ಅತ್ಯಂತ ಕೀಳಾಗಿ ನೋಡುತ್ತಿದ್ದಾರೆ. ಇಂದಿಗೂ ಹಲವು ಕಡೆಗಳಲ್ಲಿ ಪ್ರತ್ಯೇಕ ಶೌಚಾಲಯ, ತಟ್ಟೆ, ಲೋಟ ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಗೃಹ ಕಾರ್ಮಿಕರನ್ನು ಅಧಿಕೃತವಾಗಿ ಕಾರ್ಮಿಕರು ಎಂದು ಗುರುತಿಸಬೇಕು ಹಾಗೂ ಅಸಂಘಟಿತ ಕಾರ್ಮಿಕರ ಮಸೂದೆಯನ್ನು ಜಾರಿಗೊಳಿಸಬೇಕು. ಅಂತಾರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಕೇಂದ್ರ ಸರಕಾರ ಗೃಹ ಕಾರ್ಮಿಕರ ಬೇಡಿಕೆಗಳನ್ನು ಮಂಡಿಸಿ ಕಾನೂನು ರೂಪಿಸಬೇಕು. ಕಾರ್ಮಿಕರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ಸರಕಾರ ರೂಪಿಸಿರುವ ಕಾನೂನಿನಲ್ಲಿ ಗೃಹ ಕಾರ್ಮಿಕರನ್ನು ಸೇರ್ಪಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News