ಸುರಕ್ಷಿತಾಗಿ ಮನೆ ನಿರ್ಮಿಸುವುದು ಮಾಲಕರ ಜವಾಬ್ದಾರಿ: ಸಚಿವ ರಾಮಲಿಂಗಾರೆಡ್ಡಿ

Update: 2017-08-16 13:00 GMT

ಬೆಂಗಳೂರು, ಆ.16: ನಗರದಲ್ಲಿ ಮನೆಗಳನ್ನು ಭದ್ರವಾಗಿ, ಸುರಕ್ಷಿತವಾಗಿ ನಿರ್ಮಿಸಿಕೊಳ್ಳುವುದು ಮನೆ ಮಾಲಕರ ಜವಾಬ್ದಾರಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಕಳೆದ ಎರಡು ದಿನದಿಂದ ಎಡಬಿಡದೆ ಸುರಿದ ಭಾರೀ ಬಳೆಯಿಂದಾಗಿ ನಗರದ ಈಜಿಪುರದಲ್ಲಿ ನಿರ್ಮಾಣದ ಹಂತದಲ್ಲಿದ್ದ ನಾಲ್ಕು ಹಂತಸ್ತಿನ ಕಟ್ಟಡವೊಂದು ಒಂದು ಬದಿಗೆ ವಾಲಿದೆ. ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಅವರು, ನಗರದಲ್ಲಿ ವಾಸಕ್ಕಾಗಿ ನಿರ್ಮಾಣವಾಗುವ ಎಲ್ಲ ಕಟ್ಟಡಗಳು ಸುರಕ್ಷಿತವಾಗಿದೆಯಾ ಎಂಬುದನ್ನು ಪರೀಕ್ಷಿಸಲು ಅಸಾಧ್ಯ. ಮನೆ ಮಾಲಕರೇ ತಮ್ಮ ಕಟ್ಟಡಗಳ ಸುರಕ್ಷತೆಯ ಕುರಿತು ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿದರು.

ನಗರದ ಈಜಿಪುರದಲ್ಲಿ ನಾಲ್ಕು ಹಂತಸ್ತಿನ ಕಟ್ಟಡವನ್ನು ಅನುಮತಿ ಪಡೆದೇ ನಿರ್ಮಾಣಗೊಳಿಸಲಾಗುತ್ತಿತ್ತು. ಆದರೆ, ಕಟ್ಟಡದ ತಳಹದಿಯನ್ನು ಭದ್ರವಾಗಿ ನಿರ್ಮಿಸದ ಕಾರಣ ಕಳೆದ ಎರಡು ದಿನದಿಂದ ಸುರಿದ ಮಳೆಗೆ ಕಟ್ಟಡ ಒಂದು ಬದಿಗೆ ವಾಲಿದೆ. ಹೀಗಾಗಿ ಮನೆ ಮಾಲಕರು ಬಹಳ ಎಚ್ಚರಿಕೆಯಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ಅವರು ತಿಳಿಸಿದರು.

ಈಗ ಬದಿಗೆ ವಾಲಿರುವ ನಾಲ್ಕು ಹಂತಸ್ತಿನ ಕಟ್ಟಡವನ್ನು ಕೆಡವಲು ಕ್ರಮ ಕೈಗೊಳ್ಳಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಸಮೀಪದ ಮನೆಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕಳಪೆ ಮಟ್ಟದಲ್ಲಿ ಕಟ್ಟಡ ನಿರ್ಮಾಣದ ಕುರಿತು ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News