ಜೆಡಿಯುನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸಾಮಾನ್ಯ: ಡಾ.ಎಂ.ಪಿ.ನಾಡಗೌಡ

Update: 2017-08-16 13:02 GMT

ಬೆಂಗಳೂರು, ಆ.16: ರಾಷ್ಟ್ರಮಟ್ಟದಲ್ಲಿ ಜೆಡಿಯು ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯ ಸಾಮಾನ್ಯವಾಗಿದ್ದು, ಇದರಿಂದ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜೆಡಿಯು ರಾಜ್ಯಾಧ್ಯಕ್ಷ ನಾಡಗೌಡ ತಿಳಿಸಿದ್ದಾರೆ.

 ಬುಧವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಜೆಡಿಯು ರಾಜ್ಯ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಜೆಡಿಯುನಲ್ಲಿ ರಾಷ್ಟ್ರನಾಯಕರಾದ ನಿತೀಶ್ ಕುಮಾರ್ ಹಾಗೂ ಶರದ್‌ಯಾದವ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಈ ರೀತಿಯ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿ ಆಗಾಗ ನಡೆಯುತ್ತಿರುತ್ತದೆ ಎಂದು ತಿಳಿಸಿದರು.

ಜೆಡಿಯುನ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯಗಳು ಕೆಲವೇ ದಿನಗಳಲ್ಲಿ ಶಮನಗೊಳ್ಳಲಿದೆ. ಸದ್ಯ ಜೆಡಿಯು ನಾಯಕರಾದ ನಿತೀಶ್‌ಕುಮಾರ್ ಹಾಗೂ ಶರದ್‌ಯಾದವ್ ಪಕ್ಷದಲ್ಲಿಯೇ ಇದ್ದಾರೆ. ಈ ನಾಯಕರು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಆಧರಿಸಿ ರಾಜ್ಯದ ಜೆಡಿಯು ತನ್ನ ಮುಂದಿನ ನಡೆಯನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದರು.

ಜೆಡಿಯುನಲ್ಲಿ ಪದೇ ಪದೇ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಕಾರ್ಯಕರ್ತರಿಗೆ ಬೇಸರವಾಗಿರುವುದು ಸಹಜ. 10-15ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮುಂದಿನ ನಡೆಯ ಕುರಿತು ಗೊಂದಲಕ್ಕೆ ಈಡಾಗಲಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಕೇಳಿಯೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ಸಿಗಲಿ: ಇಂದಿಗೂ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಶೋಚನೀಯ ಸ್ಥಿತಿಯಲ್ಲಿದೆ. ಈ ಬಗ್ಗೆ ಸಾಚಾರ್ ವರದಿ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ತಮ್ಮ ವರದಿಗಳನ್ನು ಸರಕಾರ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗದ ಮಟ್ಟಕ್ಕೆ ತಲುಪಿದೆ ಎಂದು ನಾಡಗೌಡ ಬೇಸರ ವ್ಯಕ್ತಪಡಿಸಿದರು.

ಹಲವು ಹೋರಾಟಗಳ ಫಲವಾಗಿ ದಲಿತ ಸಮುದಾಯಕ್ಕೆ ಹಲವು ಸೌಲಭ್ಯಗಳು ಸಿಗುವಂತಾಗಿದೆ. ಇದೇ ಮಾದರಿಯಲ್ಲಿ ಅಲ್ಪಸಂಖ್ಯಾತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಗಳನ್ನು ರೂಪಿಸಬೇಕಾಗಿದೆ. ಇದಕ್ಕೆ ಬೇಕಾದ ಅರಿವನ್ನು ಪಕ್ಷದ ವತಿಯಿಂದ ಮೂಡಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟದ ಅಧ್ಯಕ್ಷ ಸೈಯದ್ ಮೆಹಬೂಬ್, ಜೆಡಿಯು ಉಪಾಧ್ಯಕ್ಷ ಧರ್ಮಪ್ಪ, ಮಾಜಿ ಶಾಸಕ ಮಹಿಮಾ ಪಟೇಲ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉಮೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News