ನಾನು ರಾಜ್ಯದ ಜನತೆಗೆ ಉತ್ತರದಾಯಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-08-16 18:31 GMT

ಬೆಂಗಳೂರು, ಆ.16: ಕೇಂದ್ರ ಸರಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಈ ಬಗ್ಗೆ ಲೆಕ್ಕ ಕೊಡಿ ಎಂದು ಕೇಳಿರುವ ಬಿಜೆಪಿ ರಾಷ್ಟ್ರೀಯ ಅಮಿತ್ ಶಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ಥಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬಳಿ ಲೆಕ್ಕ ಕೇಳಲು ಅಮಿತ್ ಶಾ ಯಾರು? ನಾನು ಉತ್ತರ ನೀಡಬೇಕಾದ್ದು ರಾಜ್ಯದ ಜನತೆ ಹಾಗೂ ವಿಧಾನಸಭೆಗೆ. ಅಮಿತ್ ಶಾಗಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯ ಸರಕಾರವನ್ನು ಅತ್ಯಂತ ಭ್ರಷ್ಟ ಸರಕಾರವೆಂದು ಅಮಿತ್ ಶಾ ಟೀಕಿಸಿದ್ದಾರೆ. ಸ್ವತಃ ಜೈಲಿಗೆ ಹೋಗಿ ಬಂದಿರುವ ಅಮಿತ್ ಶಾ, ತಮ್ಮ ಪಕ್ಕದಲ್ಲಿ ಯಡಿಯೂರಪ್ಪರನ್ನು ಕೂರಿಸಿಕೊಂಡಿದ್ದಾರೆ. ಜನಾರ್ದನ ರೆಡ್ಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯನಾಯ್ಡುರನ್ನು ಪಕ್ಷದಲ್ಲಿ ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

4 ವರ್ಷ 3 ತಿಂಗಳ ಅವಧಿಯಲ್ಲಿ ಭ್ರಷ್ಟಾಚಾರ ಹಾಗೂ ಹಗರಣ ಮುಕ್ತ ಸರಕಾರ ಯಾವುದಾದರೂ ಈ ದೇಶದಲ್ಲಿದ್ದರೆ ಅದು ನಮ್ಮ ರಾಜ್ಯದ ಸರಕಾರ. ನಮ್ಮ ವಿರುದ್ಧದ ಆರೋಪಗಳಿಗೆ ಮೋದಿ ಹಾಗೂ ಶಾ ಬಳಿ ದಾಖಲಾತಿಗಳಿವೆಯೆ ಎಂದ ಅವರು, ಭ್ರಷ್ಟಾಚಾರದ ಬಗ್ಗೆ ಎಂತಹವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿಯಲ್ಲಿನ ಯಡಿಯೂರಪ್ಪ-ಶೋಭಾ, ಅನಂತ್‌ಕುಮಾರ್, ಈಶ್ವರಪ್ಪ ನೇತೃತ್ವದ ಗುಂಪುಗಾರಿಕೆಗೆ ಎಚ್ಚರಿಕೆ ನೀಡಿ ಛೀಮಾರಿ ಹಾಕಲು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ನಮ್ಮ ವಿರುದ್ಧ ಆರೋಪ ಮಾಡುವ ನೈತಿಕತೆ ಇವರಿಗಿಲ್ಲ. ಅಮಿತ್ ಶಾಗೆ ಕ್ರಿಮಿನಲ್ ತಂತ್ರಗಾರಿಕೆ ಮಾಡುವುದು ಗೊತ್ತೆ ಹೊರತು, ನ್ಯಾಯಯುತ ತಂತ್ರಗಾರಿಕೆ ಮಾಡುವುದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

2015-16 ರಿಂದ 2019-20ರವರೆಗಿನ 14ನೆ ಹಣಕಾಸು ಆಯೋಗವು ರಾಜ್ಯಕ್ಕೆ 2.07 ಲಕ್ಷ ಕೋಟಿ ರೂ.ಗಳ ಅನುದಾನ ನಿಗದಿ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ 1.02 ಲಕ್ಷ ಕೋಟಿ ರೂ.ಗಳು ಬರಬೇಕಿತ್ತು. ಆದರೆ, ಈವರೆಗೆ 92,343 ಕೋಟಿ ರೂ.ಗಳು ಮಾತ್ರ ಬಂದಿದೆ. ಇನ್ನು ಸುಮಾರು 10 ಸಾವಿರ ಕೋಟಿ ರೂ.ಅನುದಾನ ಬರಬೇಕಿದೆ. ಈ ಬಗ್ಗೆ ಅನಂತ್‌ಕುಮಾರ್, ಸದಾನಂದಗೌಡ, ಜಗದೀಶ್‌ಶೆಟ್ಟರ್, ಈಶ್ವರಪ್ಪ, ಯಡಿಯೂರಪ್ಪ ಚಕಾರವೆತ್ತುವುದಿಲ್ಲ. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಯಾವುದು ಇಲ್ಲ ಎಂದು ಅವರು ಕಿಡಿಕಾರಿದರು.

 ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳುತ್ತಿದ್ದ ಯಡಿಯೂರಪ್ಪ ಒಬ್ಬ ಢೋಂಗಿ ರಾಜಕಾರಣಿ. ಅವರಿಗೆ ರೈತರ ಬಗ್ಗೆ ನಿಜವಾದ ಕಳಕಳಿ, ಕಾಳಜಿಯಿದ್ದರೆ, ಬಿಜೆಪಿಯ 17 ಸಂಸದರೊಂದಿಗೆ ಸಂಸತ್ತಿಗೆ ಮುತ್ತಿಗೆ ಹಾಕಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯದ ರೈತರು ಪಡೆದಿರುವ 42 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡಿಸುತ್ತಿದ್ದರು. ನಮ್ಮ ಸರಕಾರ 22.27 ಲಕ್ಷ ರೈತರ 10,736 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಜಾತಿ, ಧರ್ಮದ ಹೆಸರಿನಲ್ಲಿ ಪ್ರಚೋದನೆ ನೀಡುವ ನಿಮಗೆ ರಾಜ್ಯದಲ್ಲಿ ಮತ ಯಾಚಿಸಲು ನೈತಿಕ ಹಕ್ಕಿಲ್ಲ. ರಾಜ್ಯದಲ್ಲಿ ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕ್ರಿಮಿನಲ್ ಸಂಚುಗಳು, ಕೋಮುವಾದ ಹರಡಿಸುವ ಪ್ರಯತ್ನ, ಐಟಿ, ಇಡಿ, ಸಿಬಿಐ ಅನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿದರೆ ತೀವ್ರ ಹೋರಾಟ ನಡೆಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷದ ರಾಜಕಾರಣ ಇರಬಾರದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಲ್ಲು ಹೊಡೆಯುವುದು ನಮ್ಮ ಸಂಸ್ಕೃತಿಯಲ್ಲ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರಲಿ, ಹೋಗಲಿ ಅದಕ್ಕೆ ನಮ್ಮ ತಕಾರಾರು ಏನು ಇಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಗುಜರಾತ್‌ನ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಲು ಹೋದಾಗ ಬಿಜೆಪಿಯವರು ಅವರ ವಾಹನದ ಮೇಲೆ ಕಲ್ಲಿನ ದಾಳಿ ನಡೆಸಿದ್ದಾರೆ. ಆದರೆ, ನಾವು ಅಮಿತ್ ಶಾಗೆ ಕಲ್ಲು ಹೊಡೆಯಲ್ಲ. ಅದು ನಮ್ಮ ಸಂಸ್ಕೃತಿಯಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News