ರೈತರಲ್ಲಿ ಆಶಾಕಿರಣ ಮೂಡಿಸಿದ ‘ರಾಮಥಾಳ ಹನಿ ನೀರಾವರಿ ಯೋಜನೆ’

Update: 2017-08-18 13:39 GMT

ಬಾಗಲಕೋಟೆ ಆ.18: ಏಷ್ಯಾದ ಅತಿ ದೊಡ್ಡ ಹನಿ ನೀರಾವರಿ ಯೋಜನೆಯಾದ ರಾಮಥಾಳ (ಮರೋಳ) ಹನಿ ನೀರಾವರಿ ಯೋಜನೆ ಸೆಪ್ಟಂಬರ್ ತಿಂಗಳಲ್ಲಿ ಉದ್ಘಾಟನೆಯಾಗಲಿದೆ.

ಬರಡು ಭೂಮಿಯನ್ನು ಹಸಿರಾಗಿಸುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ 90 ಗ್ರಾಮಗಳ ಎಪ್ಪತ್ತು ಸಾವಿರ ಎಕರೆಗೆ ನೀರಾವರಿ ಪ್ರಯೋಜನ ದೊರಕಿದೆ. ಈ ಯೋಜನೆಯ ಲಾಭದಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಭರಪೂರ ಕೃಷಿ ಚಟುವಟಿಕೆಗಳು ಗರಿಗೆದರಿದೆ.

ನಾರಾಯಣಪುರ ಜಲಾಶಯದಿಂದ ತೆಲಾಂಗಣಕ್ಕೆ ವರ್ಷಕ್ಕೆ 2 ಟಿಎಂಸಿ ನೀರು ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ರಾಜ್ಯದ ಜನತೆಗೆ ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಈ ಯೋಜನೆಯನ್ನು ಕೃಷ್ಣ ಭಾಗ್ಯಜಲ ನಿಗಮವು ಕೈಗೆತ್ತಿಕೊಂಡಿತ್ತು. ನಾರಾಯಣಪುರ ಜಲಾಶಯದ ಹಿನ್ನೀರನ್ನು ಬಳಸಿ ಹುನಗುಂದದ ರಾಮಥಾಳವನ್ನು ಕೇಂದ್ರವಾಗಿಸಿಕೊಂಡು ಎರಡು ಹಂತದಲ್ಲಿ ಒಟ್ಟು 38.050 ಹೆಕ್ಟೇರ್(ಒಟ್ಟು 70 ಸಾವಿರ ಎಕರೆ) ಭೂ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಯ ಮೂಲಕ ನೀರು ಉಣಿಸಲು ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದೆ.

ರೈತರ ಜಮೀನುಗಳಿಗೆ ನೀರು ಹರಿಸಲು 120 ಕಿ.ಮೀ. ಮುಖ್ಯ ಪೈಪ್, 5000 ಕಿ.ಮೀ. ಸಬ್ ಪೈಪ್ ಸಂಪರ್ಕಗಳಿವೆ. ಪ್ರತಿ 500 ಎಕರೆ ಪ್ರದೇಶದಲ್ಲಿ ವಾಟರ್ ಫಿಲ್ಟರ್ ಕೇಂದ್ರಗಳನ್ನು ನಿರ್ಮಿಸಲಾಗಿದೆ ಹೊಲದಲ್ಲಿ ಮೂರು ಲಕ್ಷ ಕಿ.ಮೀ. ಸಣ್ಣ, ಸೂಕ್ಷ್ಮಪೈಪ್‌ಗಳನ್ನು ಹಾಕಲಾಗುತ್ತಿದೆ. ಈ ವಿತರಣಾ ಜಾಲವು ಸಂಪೂರ್ಣ ಗಣಕೀಕೃತವಾಗಿದ್ದು, ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

 ಸುಮಾರು 800 ಕೋಟಿ ರೂ ವೆಚ್ಚದಲ್ಲಿ ಸಿದ್ಧಗೊಂಡಿರುವ ಯೋಜನೆಯನ್ನು ಐದು ವರ್ಷ ನಿರ್ವಹಣೆ ಕೈಗೊಳ್ಳುವಂತೆ ಗುತ್ತಿಗೆದಾರ ಸಂಸ್ಥೆಗಳಿಗೆ ಷರತ್ತು ವಿಧಿಸಲಾಗಿದೆ. ಜತೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಸಂಬಂಧ ರೈತರಿಗೆ ಪ್ರಾಯೋಗಿಕ ತರಬೇತಿ ನೀಡಿದೆ. ಅತಿ ಕಡಿಮೆ ನೀರಿನ ಪ್ರಮಾಣದಲ್ಲಿ ಉತ್ತಮ ಫಸಲು ಬರುವಂತ ತರಕಾರಿಗಳು, ಜೋಳ, ಹತ್ತಿ, ಕಡಲೆ, ಸೂರ್ಯಕಾಂತಿ ಬೆಳೆಯಲು ಉತ್ತೇಜಿಸಲಾಗುತ್ತಿದೆ.

 ಯೋಜನೆ ಅನುಷ್ಠಾನದ ಬಳಿಕ 5 ವರ್ಷದವರೆಗೆ ಗುತ್ತಿಗೆದಾರ ಸಂಸ್ಥೆಗಳು ನಿರ್ವಹಣೆ ಕೈಗೊಳ್ಳುತ್ತದೆ. ಆ ಬಳಿಕ ನಿರ್ವಹಣೆ, ವಿದ್ಯುತ್ ಬಿಲ್ ಪಾವತಿ ಹಾಗೂ ಮೈಕ್ರೊ ಪೈಪ್‌ಗಳ ಬದಲಾವಣೆ ಸಂಬಂಧ ರೈತರಿಂದ ಪ್ರತಿ ಎಕರೆಗೆ ವಾರ್ಷಿಕವಾಗಿ 1300 ರೂ. ಸಂಗ್ರಹಿಸಲಾಗುತ್ತದೆ. ಈ ಉದ್ದೇಶಕ್ಕೆ 53 ರೈತ ಸಹಕಾರ ಸಂಘಗಳನ್ನು ನೋಂದಣಿ ಮಾಡಿಸಲಾಗಿದೆ ಎಂದು ಕೆಬಿಜೆಎನ್‌ಎಲ್‌ನ ಸಹಾಯಕ ಇಂಜಿನಿಯರ್ ವಸಂತ್ ಉಳ್ಳಿ ತಿಳಿಸಿದರು.

 ರೈತರಿಗೆ ತರಬೇತಿ

ಹನಿ ನೀರಾವರಿಯಿಂದಾಗುವ ಪ್ರಯೋಜನ, ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಯಾವ ಕಾಲದಲ್ಲಿ ಸೂಕ್ತ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಲು ಸಹಕಾರ ಸಂಘಗಳನ್ನು ರಚಿಸಲಾಗಿದೆ.

-ಎಂ.ಸಿ.ಉಮೇಶ, ಬೇಸಾಯ ತಜ್ಞ

ನಿರಂತರ ಬರಗಾಲದಿಂದ ಬದುಕು ಮೂರಾಬಟ್ಟೆಯಾಗಿತ್ತು. ಈಗ ಯಾವುದೇ ಹೊರೆಯಲ್ಲಿದೆ ನಮ್ಮ ಹೊಲದಾಗೆ ನೀರು ಕೊಟ್ಟು ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. ಮೊದಲು ಕಡಲೆ ಮಾತ್ರ ಬೆಳೆಯುತ್ತಿದ್ದೆ. ಈಗ ಸೌತೇಕಾಯಿ, ಮೆಣಸಿನ ಕಾಯಿ, ಉಳ್ಳಾಗಡ್ಡಿ ಬೇಸಾಯ ಮಾಡಲಾಗಿದೆ.

-ನಾಗಪ್ಪ ಬಸಪ್ಪ,

 ಫಲಾನುಭವಿ ರೈತ ಹುನಗುಂದ ರಾಮಥಾಳ ಹನಿ ನೀರಾವರಿ ಯೋಜನೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಯೋಜನೆಯಿಂದ ವಾರ್ಷಿಕವಾಗಿ ಐನೂರು ಕೋಟಿ ರೂ. ವೌಲ್ಯದ ಕೃಷಿ ಉತ್ಪನ್ನಗಳನ್ನು ಬೆಳೆಯುವ ನಿರೀಕ್ಷೆಯಿದೆ.

-ಎಂ.ಬಿ. ಪಾಟೀಲ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News