ಮೊರಾರ್ಜಿ ದೇಸಾಯಿ ಶಾಲೆಗಳ ಹೆಸರು ಬದಲಾವಣೆಯಿಲ್ಲ: ಸಚಿವ ಎಚ್.ಆಂಜನೇಯ

Update: 2017-08-18 13:54 GMT

ಬೆಂಗಳೂರು, ಆ.18: ಹೊಸದಾಗಿ ಆರಂಭಿಸಿರುವ ಶಾಲೆಗಳಿಗೆ ಮಾತ್ರ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನ ಜೊತೆಗೆ ‘ಶ್ರೀಮತಿ ಇಂದಿರಾ ಗಾಂಧಿ’ ಹಾಗೂ ‘ಡಾ.ಬಿ.ಆರ್.ಅಂಬೇಡ್ಕರ್’ರವರ ಹೆಸರುಗಳನ್ನು ಇಡಲಾಗಿದೆಯೆ ಹೊರತು, ಅಸ್ತಿತ್ವದಲ್ಲಿರುವ ಯಾವುದೆ ವಸತಿ ಶಾಲೆಯ ಹೆಸರನ್ನು ಬದಲಾಯಿಸಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್‌ರವರ 125ನೆ ಜನ್ಮದಿನೋತ್ಸವದ ನೆನಪಿಗಾಗಿ 125 ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳು ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸೇವೆಯನ್ನು ಸ್ಮರಿಸಿ 100 ವಸತಿ ಶಾಲೆಗಳನ್ನು ಪ್ರಸಕ್ತ ವರ್ಷ ತೆರೆಯಲಾಗಿದೆ ಎಂದರು.

ಇವುಗಳ ಜೊತೆಗೆ 41 ಕಿತ್ತೂರು ರಾಣಿ ಚೆನ್ನಮ್ಮ ಹಾಗೂ 32 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿ ಒಟ್ಟು 298 ಶಾಲೆಗಳು ಆರಂಭವಾಗಿದ್ದು, ಹೊಸದಾಗಿ 14,900 ಮಕ್ಕಳಿಗೆ ಉಚಿತ ಆಧುನಿಕ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಆಂಜನೇಯ ತಿಳಿಸಿದರು.

ರಾಜ್ಯದ ಇತಿಹಾಸದಲ್ಲೆ ಒಂದೇ ವರ್ಷ ಇಷ್ಟು ಶಾಲೆಗಳನ್ನು ಎಂದು ತೆರೆದಿರಲಿಲ್ಲ. ಇದೊಂದು ದಾಖಲೆಯಾಗಿದ್ದು, ಅವಕಾಶ ವಂಚಿತ ಗ್ರಾಮೀಣ ಹಿಂದುಳಿದವರು, ಬಡವರು ಹಾಗೂ ಶೋಷಿತ ಸಮುದಾಯದ ಮಕ್ಕಳು ಸಿರಿವಂತರ ಮಕ್ಕಳಿಗೆ ಸರಿಸಮಾನವಾಗಿ ಶಿಕ್ಷಣದ ಅವಕಾಶ ಪಡೆದಿದ್ದಾರೆ. ಇದು ಸರಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ನಾಡಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಸರಕಾರಕ್ಕೆ ಅಪಾರ ಗೌರವವಿದೆ. ಆದರೆ, ಕೆಲವು ಮಾಧ್ಯಮಗಳಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳ ಹೆಸರನ್ನು ಬದಲಾಯಿಸಲಾಗಿದೆ ಎನ್ನುವ ಅರ್ಥದ ಟೀಕೆಗಳು ಕೇಳಿ ಬಂದಿವೆ. ಆದುದರಿಂದ, ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಆಂಜನೇಯ ತಿಳಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬರುವ ಮುನ್ನ 13 ವರ್ಷಗಳಲ್ಲಿ ರಾಜ್ಯದಲ್ಲಿ 379 ವಸತಿ ಶಾಲೆ, ಕಾಲೇಜುಗಳು ಇದ್ದು, ಸುಮಾರು 92,410 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೌಲಭ್ಯ ದೊರೆಯುತ್ತಿತ್ತು. ನಮ್ಮ ಸರಕಾರ ಬಂದ ನಂತರ 440 ವಸತಿ ಶಾಲೆ, ಕಾಲೇಜುಗಳನ್ನು ಆರಂಭಿಸಿ, ಹೆಚ್ಚುವರಿಯಾಗಿ 39,590 ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು.

ಇದುವರೆಗೆ ರಾಜ್ಯದಲ್ಲಿ ಒಟ್ಟು 819 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ ಶಾಲೆ, ಕಾಲೇಜುಗಳಲ್ಲಿ 1.32 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಆಹಾರ, ಸಮವಸ್ತ್ರ, ಶೂ, ಸಾಕ್ಸ್, ಲೇಖನ ಸಾಮಗ್ರಿ, ಪಠ್ಯಪುಸ್ತಕಗಳು ಹಾಗೂ ಇತರೆ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ ಎಂದು ಆಂಜನೇಯ ತಿಳಿಸಿದರು.

ರಾಜ್ಯ ಸರಕಾರವು ಪ್ರಸಕ್ತ ಸಾಲಿನಲ್ಲಿ ವಸತಿ ಶಾಲೆ, ಕಾಲೇಜುಗಳು ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಒಟ್ಟು 606.23 ಕೋಟಿ ರೂ.ವೆಚ್ಚ ಮಾಡುತ್ತಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಸರಾಸರಿ 43 ಸಾವಿರ ರೂ.ವೆಚ್ಚ ಭರಿಸಲಾಗುತ್ತಿದೆ. ಬಹುಷಃ ಬೇರೆ ಯಾವುದೇ ರಾಜ್ಯದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಇಷ್ಟು ಹಣ ವೆಚ್ಚ ಮಾಡುತ್ತಿರುವುದು ಅಪರೂಪ ಎಂದು ಅವರು ಹೇಳಿದರು.

ನಮ್ಮ ಸರಕಾರವು 205 ವಸತಿ ಶಾಲೆ, ಕಾಲೇಜುಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ 2,604 ಕೋಟಿ ರೂ.ವೆಚ್ಚ ಮಾಡಿದೆ. ಹಾಲಿ 81 ವಸತಿ ಶಾಲೆ, ಕಾಲೇಜುಗಳ ಕಾಮಗಾರಿಯನ್ನು 1,215 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿನ 577 ವಸತಿ ಶಾಲೆ, ಕಾಲೇಜುಗಳಿಗೆ 8-10 ಎಕರೆ ಜಮೀನಿನಂತೆ ಇದುವರೆಗೆ 5,770 ಎಕರೆ ಜಮೀನನ್ನು ಪಡೆಯಲಾಗಿದೆ. ಇನ್ನು 241 ವಸತಿ ಶಾಲೆ, ಕಾಲೇಜುಗಳಿಗೆ ಸೂಕ್ತ ಜಮೀನುಗಳನ್ನು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಆಂಜನೇಯ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News