ಗುಡ್ಡ ಅಗೆದು ಇಲಿಯನ್ನೂ ಹಿಡಿಯದೇ ವಾಪಸಾದ ಶಾ

Update: 2017-08-19 04:06 GMT

ರಾಜ್ಯದಲ್ಲಿ ಗುಡ್ಡ ಅಗೆಯಲೆಂದು ಬಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಲಿಯನ್ನೂ ಹಿಡಿಯದೇ ವಾಪಸಾಗಿದ್ದಾರೆ. ಅಮಿತ್ ಶಾ ಕುರಿತಂತೆ ನಾಟಕೀಯ ಮತ್ತು ರೋಚಕ ವರದಿಗಳನ್ನು ಸೃಷ್ಟಿಸಿ ಮಾಧ್ಯಮಗಳು ಸುಸ್ತಾದವಾದರೂ ಅದು ಬಿಜೆಪಿಯ ಮೇಲೆ ಅಥವಾ ರಾಜ್ಯದ ಜನತೆಯ ಮೇಲೆ ಯಾವ ಪರಿಣಾಮವನ್ನೂ ಬೀರಿದಂತಿಲ್ಲ. ಶಾ ಅವರ ರಾಜ್ಯ ಪ್ರವೇಶದ ಬಗ್ಗೆ ಉತ್ಪ್ರೇಕ್ಷೆಯ ವಾತಾವರಣವೊಂದನ್ನು ಸೃಷ್ಟಿಸಲು ಒಂದು ತಿಂಗಳ ಹಿಂದೆಯೇ ಯೋಜನೆಗಳು ರೂಪುಗೊಂಡಿದ್ದವು. ಅಮಿತ್ ಶಾ ಅವರ ರಾಜ್ಯ ಪ್ರವೇಶ ಮತ್ತು ಗುಜರಾತ್ ರಾಜ್ಯಸಭಾ ಚುನಾವಣೆಗೆ ಕಾಣದ ನಂಟೊಂದನ್ನು ಬೆಸೆಯಲಾಗಿತ್ತು.

ರಾಜ್ಯಸಭಾ ಚುನಾವಣೆಯಲ್ಲಿ ಮೂರನೆ ಬಿಜೆಪಿಯ ಮೂರನೆ ಅಭ್ಯರ್ಥಿಗೆಲ್ಲುವಂತೆ ಮಾಡಿ, ಕಾಂಗ್ರೆಸ್‌ಗೆ ತೀವ್ರ ಮುಖಭಂಗಗೊಳಿಸುವುದು, ಆ ಮೂಲಕ ಅಮಿತ್ ಶಾ ಅವರ ರಾಜಕೀಯ ‘ಚಾಣಕ್ಯ’ತನವನ್ನು ವಾರವಿಡೀ ಡಂಗುರ ಸಾರುವುದು ಬಿಜೆಪಿಯ ತಂತ್ರದ ಮೊದಲನೆ ಭಾಗ. ಇಲ್ಲಿ ಮಾಧ್ಯಮಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕುರಿತಂತೆ ಕಾರ್ಯತಂತ್ರಗಳನ್ನು ಹೆಣೆಯಲಾಗಿತ್ತು. ಅಂದರೆ ಅದಕ್ಕೆ ಸಂಬಂಧಪಟ್ಟ ‘ಪ್ಯಾಕೇಜ್’ಗಳ ವಿವರಗಳನ್ನು ಆಯಾ ಟಿವಿ ಚಾನೆಲ್‌ಗಳಿಗೆ ಬಿಡುಗಡೆ ಮಾಡಲಾಗಿತ್ತು ಎಂಬ ವ್ಯಾಪಕ ಆರೋಪವಿದೆ. ಇದೇ ಸಂದರ್ಭದಲ್ಲಿ ಗುಜರಾತ್‌ನ ಕಾಂಗ್ರೆಸ್ ಶಾಸಕರು ಬೆಂಗಳೂರು ರೆಸಾರ್ಟ್‌ನಲ್ಲಿ ತಂಗಿದ ಪ್ರಕರಣದಲ್ಲಿ ಡಿಕೆಶಿ ಮುಖ್ಯಪಾತ್ರ ವಹಿಸಿರುವುದರಿಂದ ಐಟಿಯನ್ನು ಬಳಸಿ ಅವರನ್ನೂ ಬಗ್ಗು ಬಡಿಯುವುದು ಎರಡನೆ ತಂತ್ರ. ಆ ಮೂಲಕ ರಾಜ್ಯ ಕಾಂಗ್ರೆಸ್‌ನ್ನು ಮುಜುಗರಕ್ಕೊಳಪಡಿಸುವುದು ಅದರ ಗುರಿ. ಮೂರನೆಯ ಹಂತವಾಗಿ ಅಮಿತ್ ಶಾ ರಾಜ್ಯ ಪ್ರವೇಶ.

ಈ ಪ್ರವೇಶವನ್ನು ‘ಯಕ್ಷಗಾನದಲ್ಲಿ ಮಧ್ಯರಾತ್ರಿ ಮಹಿಷಾಸುರನ ಪ್ರವೇಶದ ಸಂದರ್ಭದಲ್ಲಿ ಚಂಡೆ, ದೊಂದಿಯ ಜೊತೆಗೆ ಗದ್ದಲ ಎಬ್ಬಿಸಿದಂತೆ ಒಂದು ಹುಸಿ ಸಂಚಲನವನ್ನು ಮಾಧ್ಯಮಗಳ ಮೂಲಕ ರಾಜ್ಯ ಬಿಜೆಪಿಯೊಳಗೆ ಸೃಷ್ಟಿಸುವುದು ಮಾಧ್ಯಮಗಳ ಹೊಣೆಗಾರಿಕೆಯಾಗಿತ್ತು. ಆ ಮೂಲಕ, ಗಾಢ ನಿದ್ದೆಯಲ್ಲಿರುವ ಅಥವಾ ಸೋತು ಪೇಲವವಾಗಿರುವ ಬಿಜೆಪಿಯನ್ನು ಎಬ್ಬಿಸುವ ಉದ್ದೇಶವನ್ನು ಕೇಂದ್ರ ವರಿಷ್ಠರು ಹೊಂದಿದ್ದರು. ಆದರೆ ದುರದೃಷ್ಟವಶಾತ್, ಈ ಯಕ್ಷಗಾನ ಪ್ರಸಂಗದ ನಾಂದಿಯೇ ಸರಿಯಿದ್ದಿರಲಿಲ್ಲ. ಆರಂಭದಲ್ಲೇ ವರಿಷ್ಠರ ಎಲ್ಲ ಯೋಜನೆಗಳೂ ನೆಲಕಚ್ಚಿದವು. ಗುಜರಾತ್‌ನಲ್ಲಿ ರಾಜ್ಯಸಭಾ ಸದಸ್ಯನ ಆಯ್ಕೆಯಲ್ಲಿ ಅಮಿತ್ ಶಾ ಬಳಗಕ್ಕೆ ತೀವ್ರ ಮುಖಭಂಗವಾಯಿತು. ಅದು ಅಮಿತ್ ಶಾ ಬಳಗ, ತಾವಾಗಿಯೇ ಬೇಡಿ ಪಡೆದುಕೊಂಡ ಅವಮಾನವಾಗಿತ್ತು.

ಇತ್ತ, ಡಿಕೆಶಿ ನಿವಾಸದ ಮೇಲೆ ನಡೆದ ಐಟಿ ದಾಳಿ ನಿರೀಕ್ಷಿತ ಪರಿಣಾಮವನ್ನು ಬೀರಲಿಲ್ಲ. ಗುಜರಾತ್‌ನಿಂದ ಆಗಮಿಸಿದ ಶಾಸಕರಿಗೆ ಹಣಹಂಚಿಕೆ ಕಾರ್ಯ ನಡೆಯಬಹುದು ಎನ್ನುವ ಊಹೆಯೊಂದಿಗೆ ರೆಸಾರ್ಟ್‌ನ ಮೇಲೆಯೂ ಐಟಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿತ್ತು. ನಿರೀಕ್ಷಿಸಿದಂತಹ ಯಾವ ನಗದೂ ಡಿಕೆಶಿ ನಿವಾಸದಲ್ಲಿ ಅವರಿಗೆ ಕಾಣಿಸದೇ ಇದ್ದುದರಿಂದ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಯಿತು. ಮಾಧ್ಯಮಗಳು ಡಿಕೆಶಿಯ ನಿವಾಸದಲ್ಲಿ ಪತ್ತೆಯಾದ ನಗದುಗಳ ಕುರಿತಂತೆ ವೈಭವೀಕರಿಸಿ ವರದಿ ಮಾಡಿದವಾದರೂ, ಆ ವರದಿಯ ಆಧಾರದಲ್ಲಿ ಡಿಕೆಶಿಯ ಮೇಲೆ ಐಟಿ ಅಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳುವಂತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಡಿಕೆಶಿಯ ನಿವಾಸದ ಮೇಲೆ ದಾಳಿ ನಡೆದಾಗ, ಡಿಕೆಶಿ ವಿರುದ್ಧವಾಗಲಿ, ಕಾಂಗ್ರೆಸ್‌ನ ವಿರುದ್ಧವಾಗಲಿ ರಾಜ್ಯ ಬಿಜೆಪಿಯ ಮುಖಂಡರು ಒಂದು ಸಣ್ಣ ಹೇಳಿಕೆಯನ್ನೂ ನೀಡಲಿಲ್ಲ.

ಹೀಗೆ, ಅಮಿತ್ ಶಾ ಅವರ ರಾಜ್ಯ ರಂಗ ಪ್ರವೇಶ ‘ಮಹಿಷಾಸುರನ ಅಬ್ಬರ’ ಬಿಡಿ, ಬಾಲಗೋಪಾಲ ವೇಷಕ್ಕಿಂತ ಪೇಲವವಾಗಿತ್ತು. ಮಾಧ್ಯಮಗಳಷ್ಟೇ ಅತ್ಯುತ್ಸಾಹದಿಂದ ‘ಆಧುನಿಕ ಚಾಣಕ್ಯ’ನ ರಾಜ್ಯ ಕಾರ್ಯತಂತ್ರಗಳನ್ನು ಬಣ್ಣಿಸಿ ಬರೆಯುತ್ತಿದ್ದವೇ ಹೊರತು, ಮಾಧ್ಯಮಗಳಿಗಿರುವ ಉತ್ಸಾಹ ರಾಜ್ಯ ಬಿಜೆಪಿಯೊಳಗಿರುವ ನಾಯಕರಿಗೆ ಇರಲಿಲ್ಲ. ಅಮಿತ್ ಶಾ ರಾಜ್ಯಕ್ಕೆ ಕಾಲಿಡುವುದೂ, ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಮಕ್ಕಳ ಮಾರಣಹೋಮ ನಡೆಯುವುದೂ ಜೊತೆ ಜೊತೆಯಾಗಿ ಹೋಯಿತು. ನೂರಾರು ಮಕ್ಕಳು ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಸಾಯುತ್ತಿದ್ದರೆ, ಮಾಧ್ಯಮಗಳು ‘ಚಾಣಕ್ಯ ಪುರಾಣ’ಗಳನ್ನು ಮುಖಪುಟದಲ್ಲಿ ಪ್ರಕಟಿಸುತ್ತಿರುವುದು ಜನರ ಅಸಹನೆಗೂ ಕಾರಣವಾಯಿತು.

ಇಡೀ ದೇಶ ಮಕ್ಕಳ ದುರಂತದ ಕುರಿತಂತೆ ಚರ್ಚಿಸುತ್ತಿರುವ ಹೊತ್ತಿನಲ್ಲಿ ಅಮಿತ್ ಶಾ ಬೈಠಕ್‌ನ್ನು ಓದುವ ಉತ್ಸಾಹ ರಾಜ್ಯದ ಜನತೆಗೂ ಇರಲಿಲ್ಲ. ಆದುದರಿಂದ ಮಾಧ್ಯಮಗಳಿಗೆ ನೀಡಿರುವ ಕೇಂದ್ರದ ‘ಪ್ಯಾಕೇಜ್’ ಕೂಡ ನೀರ ಮೇಲಿನ ಹೋಮದಂತಾಯಿತು. ರಾಜ್ಯಕ್ಕೇನೋ ಅಮಿತ್ ಶಾ ಕಾಲಿಟ್ಟರು. ಆದರೆ ಅವರು ಬಿಜೆಪಿಯನ್ನು ಮೇಲೆತ್ತುವುದು ಇರಲಿ, ಬಿಜೆಪಿಯೊಳಗಿರುವ ಬಿಕ್ಕಟ್ಟನ್ನೇ ಸರಿಪಡಿಸಲು ಅವರಿಗೆ ಅಸಾಧ್ಯವಾಯಿತು. ಬಿಜೆಪಿಯೊಳಗಿನ ಹಲವು ಬಣಗಳನ್ನು ‘ಹಿಂದುತ್ವ’ದ ಹೆಸರಲ್ಲಿ ಸರಿಪಡಿಸಲು ಯತ್ನಿಸಿದರಾದರೂ ಹೊಲಿಗೆ ಬಿಚ್ಚುತ್ತಲೇ ಹೋಯಿತು. ಸಿದ್ದರಾಮಯ್ಯ ಅವರ ಅಹಿಂದ ವರ್ಚಸ್ಸಿಗೆ ಪರ್ಯಾಯವಾಗಿ ಈಶ್ವರಪ್ಪ ಅವರನ್ನು ಬಳಸಿಕೊಂಡರೆ ಹೇಗೆ ಎಂಬ ಚರ್ಚೆ ಯಡಿಯೂರಪ್ಪ ಬಳಗಕ್ಕೆ ಅಪಥ್ಯವಾಯಿತು. ಇತ್ತ ಯಡಿಯೂರಪ್ಪರನ್ನು ಎಷ್ಟರಮಟ್ಟಿಗೆ ನಂಬಬೇಕು ಎನ್ನುವ ಕುರಿತಂತೆಯೂ ಅಮಿತ್‌ ಶಾ ಕೊನೆಯವರೆಗೂ ಗೊಂದಲದಲ್ಲೇ ಇದ್ದರು.

ಯಾಕೆಂದರೆ, ಆರೆಸ್ಸೆಸ್ ಕರ್ನಾಟಕದಲ್ಲಿ ತಮ್ಮ ನಾಯಕ ಸಂತೋಷ್ ಮೂಲಕ ಹೊಸದಾಗಿ ಬಿಜೆಪಿಯನ್ನು ಕಟ್ಟುವ ಯೋಜನೆಯನ್ನು ರೂಪಿಸಿತ್ತು. ಒಂದೆಡೆ ಆರೆಸ್ಸೆಸ್, ಮಗದೊಂದೆಡೆ ಈಶ್ವರಪ್ಪ ಅವರ ಅಹಿಂದ, ಇನ್ನೊಂದೆಡೆ ಯಡಿಯೂರಪ್ಪರ ಬಳಗ ಇವುಗಳೆಲ್ಲದರ ನಡುವೆ ಅಮಿತ್ ಅಕ್ಷರಶಃ ನಜ್ಜುಗುಜ್ಜಾಗಿ ಹೋಗಿದ್ದರು. ಒಂದೆಡೆ ಸಿದ್ದರಾಮಯ್ಯ ಅವರು ಹಿಂದುಳಿದವರ್ಗದ ಜನರ ಬೆಂಬಲದಿಂದ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜನಪರ ಕಾರ್ಯಕ್ರಮಗಳು ಸಿದ್ದರಾಮಯ್ಯರನ್ನು ಸದಾ ಸುದ್ದಿಯಲ್ಲಿಟ್ಟಿವೆ. ಇದರ ಜೊತೆಗೆ ಗುಜರಾತ್ ರಾಜ್ಯಸಭಾ ಚುನಾವಣೆಯ ಮುಖಭಂಗದ ಬಳಿಕ ರಾಜ್ಯದಲ್ಲಿ ಡಿಕೆಶಿಯ ವರ್ಚಸ್ಸೂ ಹೆಚ್ಚಿದೆ.

ಜೊತೆಗೆ ಲಿಂಗಾಯತರು ಸ್ವತಂತ್ರ ಧರ್ಮದ ಕುರಿತಂತೆ ಆಡುತ್ತಿದ್ದಾರೆ. ಇವೆಲ್ಲವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಮತ್ತು ಇವನ್ನೆಲ್ಲ ಹಿಂದುತ್ವದ ದಾರದಲ್ಲಿ ಪೋಣಿಸಿ ಹೇಗೆ ಬಿಜೆಪಿಯನ್ನು ಹಳಿಗೆ ತರುವುದು ಎನ್ನುವುದರಲ್ಲಿ ಅವರು ಸಂಪೂರ್ಣ ವಿಫಲರಾದರು. ಏನೂ ಕೈ ಸಾಗದೇ ಇದ್ದಾಗ, ಐಟಿ ದಾಳಿಯನ್ನು ಮುಂದಿಟ್ಟುಕೊಂಡು ಡಿಕೆಶಿ ಮತ್ತು ಕಾಂಗ್ರೆಸ್‌ನ ವಿರುದ್ಧ ಪ್ರತಿಭಟನೆ ನಡೆಸಿ ಎಂದರು. ಆದರೆ ಈ ಪ್ರತಿಭಟನೆ ಎಷ್ಟು ನಿಸ್ತೇಜವಾಗಿದೆ ಎಂದರೆ, ರಾಜ್ಯದಲ್ಲಿ ಬಿಜೆಪಿಯ ಹತಾಶೆ, ಅಸಹಾಯಕತೆಯನ್ನು ಬಹಿರಂಗಪಡಿಸುತ್ತಿವೆಯೇ ಹೊರತು, ಬಿಜೆಪಿಗೆ ಯಾವ ರೀತಿಯಲ್ಲೂ ಬಲ ತಂದುಕೊಡುತ್ತಿಲ್ಲ. ಅಮಿತ್ ಶಾ ಬರೆದುಕೊಟ್ಟ ಸ್ಕ್ರಿಪ್ಟನ್ನು, ಯಾವ ರಿಹರ್ಸಲ್ ಇಲ್ಲದೆಯೇ ಬಿಜೆಪಿ ನಾಯಕರು ರಂಗಕ್ಕಿಳಿಸಿದಂತಿದೆ ಬಿಜೆಪಿಯ ಭ್ರಷ್ಟಾಚಾರ ವಿರೋಧಿ ಹೋರಾಟ.

ಒಟ್ಟಿನಲ್ಲಿ ರಾಜ್ಯದಲ್ಲಿ ಅಮಿತ್ ಶಾ ರಂಗಪ್ರವೇಶ ಸಂಪೂರ್ಣ ವಿಫಲವಾಗಿದೆ. ಅದು ರಾಜ್ಯ ಬಿಜೆಪಿಯೊಳಗೆ ಹುಮ್ಮಸ್ಸನ್ನು ತುಂಬುವ ಬದಲು ಇನ್ನಷ್ಟು ಗೊಂದಲಗಳನ್ನು ಬಿತ್ತುವುದರಲ್ಲಷ್ಟೇ ಯಶಸ್ವಿಯಾಗಿದೆ. ಈ ಸಂದರ್ಭವನ್ನು ಆರೆಸ್ಸೆಸ್ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ರಾಜ್ಯ ಬಿಜೆಪಿಯನ್ನು ಪೂರ್ಣವಾಗಿ ಹೈಜಾಕ್ ಮಾಡಿಕೊಂಡು, ತನ್ನದೇ ನಾಯಕನ ಮೂಲಕ ಬಿಜೆಪಿಯನ್ನು ಹೊಸದಾಗಿ ಕಟ್ಟುವ ತಂತ್ರನವನ್ನು ಅದು ಹಾಕಿಕೊಂಡಿದೆ. ಆದರೆ ಆರೆಸ್ಸೆಸ್ ಪ್ರವೇಶ, ಬಿಜೆಪಿಯೊಳಗೆ ಬ್ರಾಹ್ಮಣ-ಲಿಂಗಾಯತ ಬಿರುಕುಗಳನ್ನು ಇನ್ನಷ್ಟು ವಿಸ್ತರಿಸಬಹುದು. ಆರೆಸ್ಸೆಸ್ ಸಂತೋಷ್‌ರನ್ನು ಮುಂದಿಟ್ಟುಕೊಂಡು ರಾಜಕೀಯಕ್ಕಿಳಿದರೆ, ಯಡಿಯೂರಪ್ಪ ‘ಲಿಂಗಾಯತ ಸ್ವತಂತ್ರ ಧರ್ಮದ ಜೊತೆಗೆ ತನ್ನನ್ನು ಗುರುತಿಸಿಕೊಂಡು ಆರೆಸ್ಸೆಸ್‌ನ ಹಿಂದುತ್ವಕ್ಕೆ ಸವಾಲು ಹಾಕಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News