ಮುಂದಿನ ವರ್ಷದಿಂದ ಐಐಟಿ ಪ್ರವೇಶ ಪರೀಕ್ಷೆ ಸಂಪೂರ್ಣ ಆನ್‌ಲೈನ್

Update: 2017-08-21 04:33 GMT

ಚೆನ್ನೈ, ಆ.21: ಪ್ರತಿಷ್ಠಿತ ಐಐಟಿ ಪ್ರವೇಶ ಪರೀಕ್ಷೆಗಳು ಮುಂದಿನ ವರ್ಷದಿಂದ ಸಂಪೂರ್ಣ ಆನ್‌ಲೈನ್ ಆಗಲಿವೆ. ಇದು ವಿದ್ಯಾರ್ಥಿಗಳಿಗೆ ಮತ್ತು ಮೌಲ್ಯಮಾಪಕರಿಗೆ ಅನುಕೂಲವಾಗಲಿದ್ದು, ಮೌಲ್ಯಮಾಪನ ಪ್ರಕ್ರಿಯೆ ಸರಳಗೊಳಿಸಲು ಸಹಕಾರಿಯಾಗಲಿದೆ ಎಂದು ಜಂಟಿ ಪ್ರವೇಶ ಮಂಡಳಿ (ಜೆಎಬಿ) ಪ್ರಕಟಿಸಿದೆ.

ರವಿವಾರ ನಗರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಗದಿತ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಮೂಲಕವೇ ಪ್ರಶ್ನೆಗಳಿಗೆ ಉತ್ತರಿಸಲಿದ್ದು, ಪೆನ್ನು ಹಾಗೂ ಕಾಗದ ಬಳಸುವಂತಿಲ್ಲ.

ಪ್ರಸ್ತುತ ಆಪ್ಟಿಕಲ್ ಮಾರ್ಕ್ ರೀಡಿಂಗ್ ಶೀಟ್‌ಗಳನ್ನು ಬಳಸಲಾಗುತ್ತಿದ್ದು, ಪೆನ್ ಅಥವಾ ಪೆನ್ಸಿಲ್ ಬಳಸಿ ಮಾರ್ಕ್ ಮಾಡಬೇಕಾಗುತ್ತದೆ. ಇವುಗಳನ್ನು ಯಂತ್ರಗಳ ಸಹಾಯದಿಂದ ಮೌಲ್ಯಮಾಪನ ಮಾಡಲಾಗುತ್ತದೆ.

'ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು 2018ರಿಂದ ಸಂಪೂರ್ಣವಾಗಿ ಆನ್‌ಲೈನ್ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜೆಇಬಿ ಅಗತ್ಯ ಮಾಹಿತಿ ನೀಡಲಿದೆ' ಎಂದು ಮದ್ರಾಸ್ ಐಐಟಿ ನಿರ್ದೆಶಕ ಹಾಗೂ 2017ರ ಜೆಎಬಿ ಅಧ್ಯಕ್ಷರು ಪ್ರಕಟನೆಯಲ್ಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಜೆಇಇ ಮೈನ್ಸ್ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುವ ಅವಕಾಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News