ದೇವರಾಜ ಅರಸು ಭವನದ ಸ್ಥಳ ಪರಿಶೀಲನೆ

Update: 2017-08-21 10:54 GMT

ಸಾಗರ,ಆ.21 : ಹಿಂದುಳಿದ ವರ್ಗಗಳ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕುರಿತು ತರಬೇತಿ ನೀಡಲು ದೇವರಾಜ ಅರಸು ಭವನವನ್ನು ನಗರದ ಮಧ್ಯಭಾಗದಲ್ಲಿ 94 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸೋಮವಾರ ದೇವರಾಜ ಅರಸು ಭವನದ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದುಡಿಯುವ ಕೈಗಳಿಗೆ ಕೆಲಸ ಕೊಡುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ದೇವರಾಜ ಅರಸು ಅವರ ಆಶಯವಾಗಿದ್ದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಅರಸು ಭವನದ ಮೂಲಕ ಸಾಕಾರಗೊಳಿಸಲಾಗುತ್ತದೆ. ಸ್ವಯಂ ಉದ್ಯೋಗಕ್ಕೆ ಪೂರಕವಾದ ಅನೇಕ ತರಬೇತಿಗಳನ್ನು ದೇವರಾಜ ಅರಸು ಸಭಾಭವನದಲ್ಲಿ ನೀಡಲಾಗುತ್ತದೆ. ಕಾಮಗಾರಿಯನ್ನು ಶೀಘ್ರದಲ್ಲಿಯೆ ಮುಗಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ ಎಂದರು.

ಹಾಲಿ ಇರುವ ಲೋಕೋಪಯೋಗಿ ಇಲಾಖೆ ಕಚೇರಿಯು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಕಚೇರಿ ನಿರ್ಮಾಣಕ್ಕೆ 1.20 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸುಸಜ್ಜಿತ ಕಚೇರಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಈ ಸಂಬಂಧ ಶೀಘ್ರ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಡಿ.ಬಸವರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ.ರಮೇಶ್, ನಿರ್ಮಿತಿ ಕೇಂದ್ರದ ಜಿ.ಆರ್.ಈಶ್ವರಪ್ಪ, ಗುತ್ತಿಗೆದಾರ ಕೆ.ವಿ.ಜಯರಾಮ್, ನಗರಸಭೆ ಸದಸ್ಯೆ ಮರಿಯಾ ಲೀಮಾ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News