ತುಮಕೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Update: 2017-08-21 11:16 GMT

ತುಮಕೂರು,ಆ.21: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಎಸಿಬಿ ಹೂಡಿರುವ ಕೇಸನ್ನು ವಾಪಸ್ ಪಡೆಯಬೇಕು, ಎಸಿಬಿ ದುಬರ್ಳಕೆ ಮಾಡಬಾರದು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಮುಖಂಡ ಬ್ಯಾಟರಂಗೇಗೌಡ, ರಾಜ್ಯಕ್ಕೆ ಅಮಿತ್ ಶಾ ಅವರು ಬಂದು ಹೋದ ನಂತರ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ನಡುಕ ಉಂಟಾಗಿದ್ದು, ಹಿಂಬಾಗಿಲಿನಿಂದ ಬಿಜೆಪಿ ನಾಯಕರನ್ನು ಹಣಿಯಲು ಹೊರಟಿದೆ. ಈಗಾಗಲೇ ಕೋರ್ಟಿನಲ್ಲಿ ಖುಲಾಸೆಯಾಗಿರುವ ಕೇಸುಗಳಿಗೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮರು ಜೀವ ನೀಡಿ ಜನರಲ್ಲಿ ತಪ್ಪು ಭಾವನೆ ಬರುವಂತೆ ಮಾಡುತ್ತಿದೆ. ಈ ಬಗ್ಗೆ ಇಂದು ಬಿಜೆಪಿ ಮುಖಂಡರುಗಳು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಅಕ್ಷೇಪಣೆ ಸಲ್ಲಿಸಲಿದ್ದಾರೆ ಎಂದರು.

ರಾಜ್ಯ ರೈತಮೋರ್ಚ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನಿಕ ಸಂಸ್ಥೆಯೊಂದನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ನಾಯಕರನ್ನು ಹಣಿಯಲು ಹೊರಟಿದ್ದಾರೆ. ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳು ಮಾಡಿರುವ ಹಗರಣಗಳನ್ನು ಮುಚ್ಚಿ ಹಾಕಲು ಎಸಿಬಿ ಮೂಲಕ ಬಿಜೆಪಿ ಮುಖಂಡರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿಸಿ, ಅವರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಲು ಹೊರಟಿದೆ. ಡಿ.ಕೆ.ಶಿ ವಿರುದ್ಧ ಐಟಿ ರೈಡ್ ಆದಾಗ, ಆಂಜನೇಯ ಲಂಚ ಸ್ವಿಕರಿಸಿದಾಗ ಕೇಸು ದಾಖಲಿಸಿ ವಿಚಾರಣೆ ನಡೆಸುವ ಬದಲು ವಿರೋಧ ಪಕ್ಷಗಳ ಮೇಲೆ ಪ್ರಹಾರ ನಡೆಸಲು ಹೊರಟಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಹಾಕಿರುವ ಕೇಸು ವಾಪಸ್ ಪಡೆಯದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಯಾವುದೆ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿ ಗಣೇಶ್ ಮಾತನಾಡಿ, ಚುನಾವಣೆ ಹತ್ತಿರವಾದಂತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕೆಟ್ಟ ರಾಜಕಾರಣ ಮಾಡುತ್ತಿದೆ.ವಿವಿಧ ಹಗರಣಗಳಲ್ಲಿ ಸಿಲುಕಿರುವ ತಮ್ಮ ಸಹದ್ಯೋಗಿ ಮಂತ್ರಿಗಳನ್ನು ರಕ್ಷಿಸಲು ಎಸಿಬಿಯನ್ನು ಕೈಗೊಂಬೆ ಮಾಡಿಕೊಂಡು ಇತರೆ ಪಕ್ಷಗಳ ಮುಖಂಡರನ್ನು ಹಣಿಯಲು ಹೊರಟಿದೆ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ಲೋಕಾಯುಕ್ತವನ್ನು ಮೂಲೆಗುಂಪು ಮಾಡಿ,ಎಸಿಬಿ ಮೂಲಕ ವಿರೋಧಿಗಳನ್ನು ಹಣಿಯಲು ಹೊರಟಿದೆ. ಇದರ ವಿರುದ್ದ ಬಿಜೆಪಿ ನಿರಂತರ ಹೋರಾಟ ರೂಪಿಸಲಿದೆ ಎಂದರು. ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿ ಅನಿತಾ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ,ನಗರ ಅಧ್ಯಕ್ಷ ರವೀಶಯ್ಯ, ಟಿ.ಆರ್.ಸದಾಶಿವಯ್ಯ, ಸರೋಜಾಗೌಡ, ಪ್ರೇಮಹೆಗಡೆ, ರುದ್ರೇಶ್, ಸಿ.ಎನ.ರಮೇಶ್,ಕೊಪ್ಪಲ್‍ನಾಗರಾಜು,ರಂಗಾನಾಯಕ್,ಕರುಣಾರಾಧ್ಯ,ಮುನಿಯಪ್ಪ, ಮಲ್ಲಿಕಾರ್ಜುನ, ಬಸವರಾಜು  ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News