ತುಮಕೂರು: ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ

Update: 2017-08-21 11:21 GMT

ತುಮಕೂರು, ಆ.21:ಮಂಬರುವ ವಿಧಾನಸಭಾ ಚುನಾವಣೆಗೆ ಯುವಕಾಂಗ್ರೆಸ್ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶರತ್‍ಕುಮಾರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ 100ನೇ ಸಾಮಾನ್ಯ  ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಯುವಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಯುವ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು. ಹೋಬಳಿ ಮಟ್ಟದ ಪದಾಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಅರಿತು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದಾಗ ಕಾರ್ಯಕರ್ತರನ್ನು ತೆಗೆದು ಹಾಕಿ ಅವರ ಜಾಗಕ್ಕೆ ಚುರುಕಿರುವ ಯುವ ಉತ್ಸಾಹಿ ಕಾರ್ಯಕರ್ತರನ್ನು ನೇಮಿಸುವಂತೆ ಸಲಹೆ ನೀಡಿದರಲ್ಲದೆ, ಯುವ ಕಾಂಗ್ರೆಸ್‍ನ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಯುವಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಮಾತನಾಡಿ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ  ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ರಾಜ್ಯ ಸರಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ, ಕಾಂಗ್ರೆಸ್ ಪಕ್ಷದತ್ತ ಮನವೊಲಿಸಬೇಕು.ಹಲವಾರು ಭಾಗ್ಯಗಳ ಮೂಲಕ ಪ್ರತಿಯೊಬ್ಬ ಬಡವರಿಗೂ ಸರಕಾರಿ ಸವಲತ್ತು ನೀಡಿರುವ ರಾಜ್ಯ ಸರಕಾರದ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಆ ಗುಂಪು, ಈ ಗುಂಪು ಎನ್ನದೆ ಪಕ್ಷ ಟಿಕೇಟ್ ನೀಡುವ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್‍ ಕುಮಾರ್ ಮಾತನಾಡಿ, ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಪಕ್ಷಕ್ಕೆ ಬಲ ತುಂಬೋಣ ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ರಜೀನಿಕಾಂತ್,ಶಿವಕುಮಾರ್, ಶಶಿ ಹುಲಿಕುಂಟೆ ಮಠ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ದೊಡ್ಡಮನೆ, ತಾಲೂಕು ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಯುವಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಆರ್.ರಾಜೇಂದ್ರ ಅವರನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News