ಚಿಕ್ಕಮಗಳೂರು: ಅವೈಜ್ಞಾನಿಕ ಬಯೋಮೆಟ್ರಿಕ್ ವ್ಯವಸ್ಥೆ ರದ್ದು ಪಡಿಸಿ ಪಡಿತರ ವಿತರಣೆಗೆ ಆಗ್ರಹ

Update: 2017-08-21 11:32 GMT

ಚಿಕ್ಕಮಗಳೂರು, ಆ.21: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ತಲೆನೋವಾಗಿರುವ ಅವೈಜ್ಞಾನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸರ್ಕಾರ ಕೂಡಲೇ ರದ್ದುಮಾಡಿ ಗ್ರಾಹಕರಿಗೆ ಸರಳವಾದ ಪರ್ಯಾಯದೊಂದಿಗೆ ಪಡಿತರ ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸಿಪಿಐ(ಎಂ.ಎಲ್) ನ ಜಿಲ್ಲಾ ಸಮಿತಿ ಸದಸ್ಯ ಕೂದುವಳ್ಳಿ ಮಹೇಶ್ ಒತ್ತಾಯಿಸಿದ್ದಾರೆ.

ಅವರು ಈ ಕುರಿತು ಸೋಮವಾರ ಹೇಳಿಕೆ ನೀಡಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಭ್ರಷ್ಟಚಾರ, ಪಡಿತರ ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ತಡೆಯಲು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಡಿತರ ಚೀಟಿದಾರರು ಅನೇಕ ಸಮಸ್ಯೆಯನ್ನು ಎದುರಿಸುವಂತಾಗಿದೆ. ಇದರಿಂದ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವಂತಾಗುತ್ತಿದೆ.

 ಈ ವ್ಯವಸ್ಥೆಯಿಂದ ಪ್ರಮುಖವಾಗಿ ವಯೋವೃದ್ದರಿಗೆ ಹಾಗೂ ಕೈ-ಕಾಲುಗಳೇ ತಮ್ಮ ಆಸ್ತಿ ಎಂದು ನಂಬಿ ಶ್ರಮಹಾಕಿ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರು ತುಂಬಾ ತೊಂದರೆಪಡುವಂತಾಗಿದೆ. ಏಕೆಂದರೆ ದುಡಿದು ಇವರ ಕೈ ಬೆರಳಿನ ರೇಖೆಯು ಅಳಸಿ ಹೋಗಿರುವ ಕಾರಣದಿಂದ ಬಯೋಮೆಟ್ರಿಕ್ ನೀಡಲು ಅಸಾಧ್ಯವಾಗಿರುವುದರಿಂದ ಇವರು ಆಹಾರಧಾನ್ಯ ಪಡೆಯುವುಲ್ಲಿ ವಂಚಿತರಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಕೂದುವಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಕೂದುವಳ್ಳಿ, ಚಿತ್ತುವಳ್ಳಿ, ತೋರಣಮಾವು, ಮಾವಿನಹಳ್ಳಿ, ಗುಮ್ಮನ್‍ಖಾನ್ ಗ್ರಾಮಗಳ ಪಡಿತರ ಚೀಟಿದಾರರು ಬಯೋಮೆಟ್ರಿಕ್ ಪರಿಣಾಮದಿಂದ ಇಡೀ ದಿನ ತಮ್ಮೆಲ್ಲಾ ಕೆಲಸ ಬಿಟ್ಟು ಹೋಗುವಂತಾಗಿದೆ. ವಯೋವೃದ್ದರ ಹಾಗೂ ಕೂಲಿಕಾರ ಮಹಿಳೆಯರ ಕೈ ಬೆರಳಿನ ರೇಖೆಯು ಅಳಸಿ ಹೋಗಿದ್ದರೆ ಬಯೋಮೆಟ್ರಿಕ್ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಡಿತರ ನೀಡಲು ನಿರಾಕರಿಸಿದ್ದು, ನಂತರ ತಮ್ಮ ಮಕ್ಕಳು ಬಂದು ಬಯೋಮೆಟ್ರಿಕ್ ನೀಡಿದ ಮೇಲೆ ಪಡಿತರ ಧಾನ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಮಿಕರು ದುಡಿದು ತನ್ನ ಕೈಬೆರಳಿನ ರೇಖೆಯನ್ನು ಅಳಿಸಿಕೊಂಡರೆ, ವಯೋವೃದ್ದರು ಇಂತಹ ಸಮಸ್ಯೆಗೆ ಸಿಲುಕಿದರೆ ಹಾಗೂ ಇಂತಹವರಿಗೆ ಮಕ್ಕಳು ಅಥವಾ ಯಾವುದೇ ಕುಟುಂಬದ ಸದಸ್ಯರು ಇಲ್ಲದೇ ಇರುವ ಸಂದರ್ಭದಲ್ಲಿ ಒಬ್ಬರೇ ಜೀವಿಸುತ್ತಿರುವಾಗ  ಅಂತಹವರು ಪಡಿತರ ಪಡೆಯಲು ಯೋಗ್ಯರಲ್ಲವೇ. ಅಥವಾ ಇವರೇ ಭ್ರಷ್ಟಚಾರಿಗಳೇ, ಇವರು ಪಡಿತರವನ್ನು ದುರುಪಯೋಗಪಡಿ ಸಿಕೊಳ್ಳುವವರೇ ಮತ್ತು ಕೈಬೆರಳಿನ ರೇಖೆ ಅಳಸಿಹೋದರೆ ಪಡಿತರ ಪಡೆಯಲು ಅರ್ಹತೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹ ಜನವಿರೋಧಿ ನೀತಿಯಾದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕೂಡಲೇ ರದ್ದುಮಾಡಿ ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ಕೈಬೆರಳು ಅಳಸಿ ಹೋಗಿರುವವರಿಗೆ ಬಯೋಮೆಟ್ರಿಕ್ ನೀಡುವುದು ತುಂಬಾ ಕಷ್ಟವಾಗಿದ್ದು ಕಣ್ಣಿನ ಗುರುತು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಕೂಡಲೇ ಸರ್ಕಾರ ಜಾರಿ ಮಾಡಲು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News