ಚಿಕ್ಕಮಗಳೂರು: ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಸಮಾವೇಶ

Update: 2017-08-21 11:36 GMT

ಚಿಕ್ಕಮಗಳೂರು, ಆ.21: ರೋಟರಿ ಸಂಸ್ಥೆಯ ಎಲ್ಲಾ ಸಭೆಗಳು ಮತ್ತು ಕಾರ್ಯಕ್ರಮಗಳಿಗೆ ಸಾರ್ವಜನಿಕರನ್ನು ಆಹ್ವಾನಿಸುವ ಮೂಲಕ ಅವರಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎ.ಎಸ್.ಎನ್.ಹೆಬ್ಬಾರ್ ಪದಾಧಿಕಾರಿಗಳಿಗೆ ಸಲಹೆ ಮಾಡಿದರು.

ಅವರು ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ರೋಟರಿ ಕ್ಲಬ್ ವಲಯ-7 ಏರ್ಪಡಿಸಿದ್ದ ಪ್ರಗತಿ-2017 ಸಮಾವೇಶದ ಸಮಾರೋಪದಲ್ಲಿ ಮಾತನಾಡಿದರು. ಕಳೆದ 112 ವರ್ಷಗಳಿಂದ ರೋಟರಿ ಸಂಸ್ಥೆ ಸರ್ಕಾರಗಳಿಗೆ ಸಮನಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ, ಪೋಲಿಯೋ ನಿರ್ಮೂಲನೆ, ಭೂಕಂಪ, ನೆರೆ ಪೀಡಿತರಿಗೆ ಸಹಾಯಹಸ್ತ, ವೃದ್ದಾಶ್ರಮ, ಆರೋಗ್ಯ ಸೇವೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.

ಇಷ್ಟೆಲ್ಲಾ ಸೇವೆಗಳನ್ನು ಮಾಡಿದರೂ ಸಾರ್ವಜನಿಕರಿಗೆ ಸಂಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲದಿರುವುದಕ್ಕೆ ಮೂಲ ಕಾರಣ ಅವರು ರೋಟರಿಯ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಎಲ್ಲಾ ಸಭೆಗಳಿಗೂ ಮತ್ತು ಕಾರ್ಯಕ್ರಮಗಳಿಗೂ ಇನ್ನು ಮುಂದೆ ಸಾರ್ವಜನಿಕರನ್ನು ಆಹ್ವಾನಿಸಬೇಕು. ರೋಟರಿಯ ಧ್ಯೇಯೋದ್ದೇಶ  ಹಾಗೂ ಕಾರ್ಯಚಟುವಟಿಕೆಗಳನ್ನು ಪದಾಧಿಕಾರಿಗಳು ಅವರಿಗೆ ವಿವರಿಸಬೇಕು ಎಂದ ಅವರು ಈ ರೀತಿ ಮಾಡಿದಾಗ ಸಾರ್ವಜನಿಕರ ಕಣ್ಣಲ್ಲಿ ರೋಟರಿ ಸಂಸ್ಥೆ ಪ್ರಕಾಶಿಸುತ್ತದೆ ಎಂದು ತಿಳಿಸಿದರು.

ಸಾಹಿತಿ ಬೆಳವಾಡಿ ಮಂಜುನಾಥ್ ಮಾತನಾಡಿ, ಮಕ್ಕಳಲ್ಲಿ ಸಂಸ್ಕøತಿ ಬಿತ್ತುವ ಕೆಲಸವನ್ನು ರೋಟರಿ ಸಂಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.
ಸಂಸ್ಥೆಯ ಸದಸ್ಯತ್ವ ವಿಸ್ತರಣಾ ವಿಭಾಗದ ಅಧ್ಯಕ್ಷ ಜಲೇಂದ್ರ ಮಾತನಾಡಿ 2020ರ ಒಳಗೆ 21 ಕ್ಲಬ್‍ಗಳನ್ನು ಆರಂಭಿಸಬೇಕಾಗಿದ್ದು, ಅದಕ್ಕೆ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯೋನ್ಮುಖರಾಗಬೇಕು ಎಂದರು.

ರೋಟರಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್, ಸಮಾವೇಶದ ಅಧ್ಯಕ್ಷ ಉಜ್ವಲ್ ಡಿ.ಪಡುಬಿದ್ರಿ, ಸದಸ್ಯತ್ವ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಕೆ.ನಾಗೇಂದ್ರನ್, ರೋಟರಿ ಕಾಫಿ ಲ್ಯಾಂಡ್‍ನ ಅಧ್ಯಕ್ಷ ಸಿ.ಜೆ.ರವೀಂದ್ರನಾಥ್‍ನಾಯ್ಡು, ಕಾರ್ಯದರ್ಶಿ ಸಿ.ಎಂ. ನಾರಾಯಣಸ್ವಾಮಿ, ಸಹಾಯಕ ರಾಜ್ಯಪಾಲ ಎನ್.ಎಸ್.ನಾಗೇಂದ್ರ, ರಾಜೇಂದ್ರರೈ, ಅಭಿನಂದನ್ ಶೆಟ್ಟಿ, ಬಿ.ಎನ್.ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎಸ್.ಪ್ರಕಾಶ್, ಕೆ.ಜಿ.ನಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News