ರಾಜ್ಯ ಸರಕಾರದಿಂದ ಅನೈತಿಕ ರಾಜಕಾರಣ : ಜಿಲ್ಲಾ ಬಿಜೆಪಿ ಆರೋಪ

Update: 2017-08-21 12:32 GMT

ಮಡಿಕೇರಿ, ಆ.21: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಅನೈತಿಕ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಬಿಜೆಪಿ, ರಾಜಕೀಯ ಷಡ್ಯಂತ್ರಗಳಿಗೆ ಮುಂದಿನ ದಿನಗಳಲ್ಲಿ ಬಿಜೆಪಿ ತಕ್ಕ ಉತ್ತರವನ್ನು ನೀಡಲಿದೆ ಎಂದು ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್,  ರಾಜ್ಯದ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮತ್ತು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮನಗಂಡಿರುವ ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜಕಾರಣ ಮಾಡಲು ಹೊರಟಿದ್ದಾರೆ.  ಯಡಿಯೂರಪ್ಪ ಅವರ ವಿರುದ್ಧದ ಮುಗಿದು ಹೋಗಿರುವ ಡಿನೋಟಿಫೈ ಪ್ರಕರಣವನ್ನು ಮತ್ತೆ ಜೀವಂತಗೊಳಿಸಲು ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ, ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಬೇಕಾದ ಸಿದ್ಧತೆಯನ್ನು ಈಗಾಗಲೇ ಕಾರ್ಯಕರ್ತರು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಮತದಾರರೂ ಸ್ಪಂದಿಸುತ್ತಿದ್ದಾರೆ. ಕೇಂದ್ರ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಸ್ತಾರಕ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಮತದಾರರಿಂದ ವ್ಯಕ್ತವಾಗಿದೆ. ಹಾಲಿ ಶಾಸಕರುಗಳು ಅಥವಾ ಯಾರೇ ಬಿಜೆಪಿ ಅಭ್ಯರ್ಥಿಗಳಾದರೂ ಗೆಲುವು ನಿಶ್ಚಿತವೆಂದು ಭಾರತೀಶ್ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಗೌರಿ ಗಣೇಶೋತ್ಸವಕ್ಕೆ ಅನುಮತಿ ಕೇಳಲು ಹೋಗುವವರನ್ನು ಅಲೆದಾಡಿಸುವ ಪ್ರವೃತ್ತಿ ಪೊಲೀಸ್ ಇಲಾಖೆಯಲ್ಲಿ ಕಂಡು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಇತರರಿಗೆ  ತೊಂದರೆಯಾಗದಂತೆ ಉತ್ಸವವನ್ನು ಆಚರಿಸಬೇಕೆಂದು ಪೊಲೀಸರು ನಿರ್ಬಂಧ ವಿಧಿಸುತ್ತಿದ್ದು, ಧ್ವನಿವರ್ದಕ ಬಳಕೆಗೆ ಸುಪ್ರಿಂಕೋರ್ಟ್‍ನ ಆದೇಶವನ್ನು ಪಾಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ತಮ್ಮ ಆಕ್ಷೇಪವಿಲ್ಲವಾದರೂ, ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸಬಾರದು ಎಂಬ ಸುಪ್ರೀಂ ಕೋರ್ಟ್‍ನ ಆದೇಶವನ್ನು ಕೇವಲ ಹಿಂದೂಗಳ ಮೇಲೆ ಮಾತ್ರ ಹೇರದೆ ಇತರರ ಮೇಲೂ ಅದನ್ನು ಹೇರುವಂತಾಗಬೇಕು ಎಂದು ಆಗ್ರಹಿಸಿದರು.

 ರೈಲ್ವೆ ಮಾರ್ಗ ಬೇಡ:  ಕೊಡಗಿನ ಕುಶಾಲನಗರದವರೆಗೆ ರೈಲ್ವೆ ಮಾರ್ಗ ನಿರ್ಮಿಸುವುದಕ್ಕೆ ಸ್ವಾಗತವಿದೆ. ಆದರೆ ಮಕ್ಕಂದೂರುವರೆಗೆ ವಿಸ್ತರಿಸುವ ಹಾಗೂ ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ರೈಲು ಮಾರ್ಗ ಸಂಪರ್ಕ ಕಲ್ಪಿಸುವ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.60ರಷ್ಟು ಅರಣ್ಯವಿದ್ದು, ರೈಲ್ವೆ ಮಾರ್ಗದಿಂದ ಕೊಡಗಿನ ಅರಣ್ಯ ನಾಶವಾಗುವುದು ಮಾತ್ರವಲ್ಲದೆ, ಕೊಡಗು ಇಬ್ಭಾಗವಾಗುವುದರೊಂದಿಗೆ ಭೂಪಟದಿಂದ ಅಳಿದು ಹೋಗಲಿದೆ ಎಂದು ರವಿಕುಶಾಲಪ್ಪ ಆತಂಕ ವ್ಯಕ್ತಪಡಿಸಿದರು.
 ಜಿಲ್ಲಾ ವಕ್ತಾರ ನಾಪಂಡ ಎಂ.ಕಾಳಪ್ಪ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರು ವಿಧಾನಪರಿಷತ್ ಸದಸ್ಯೆಯೊಬ್ಬರ ಕೈ ಹಿಡಿದಿರುವುದು ಕಾಂಗ್ರೆಸ್‍ನ ಲಜ್ಜೆಗೇಡಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.  ಟಿ.ಪಿ.ರಮೇಶ್ ಅವರ ವಿರುದ್ಧ ಖಂಡನಾ ನಿರ್ಣಯವನ್ನು ಜಿಲ್ಲಾ ಕಾಂಗ್ರೆಸ್ ಕೈಗೊಂಡಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಕೂಡಾ ಇಂತಹ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬುವುದು ಸಾಬೀತಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿದರು.  ಪಕ್ಷದ ಉಪಾಧ್ಯಕ್ಷ ಬಿ.ಕೆ.ಅರುಣ್‍ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News