ಮುಷ್ಕರ: ಬ್ಯಾಂಕ್ ಬಳಿಕ ಅಂಚೆ ಸರದಿ

Update: 2017-08-22 03:29 GMT

ಹೊಸದಿಲ್ಲಿ, ಆ. 22: ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ, ಅಂಚೆ ಸಿಬ್ಬಂದಿ ಸಂಘ ಆ. 23ರಂದು ದೇಶಾದ್ಯಂತ ಅಂಚೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿದ ಸೌಲಭ್ಯಗಳನ್ನು ಅನುಷ್ಠಾನಕ್ಕೆ ತಾರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರಾಮೀಣ ಡಾಕ್ ಸೇವಕ್ ಕಮಿಟಿ ವರದಿಯ ಯಥಾವತ್ ಅನುಷ್ಠಾನಕ್ಕೆ ಆಗ್ರಹಿಸಿ ಈ ತಿಂಗಳ 23ರಂದು ದೇಶಾದ್ಯಂತ ಅಂಚೆ ಮುಷ್ಕರ ನಡೆಸಲಾಗುವುದು ಎಂದು ಅಂಚೆ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಪಿಇ) ಪ್ರಧಾನ ಕಾರ್ಯದರ್ಶಿ ಆರ್.ಎನ್.ಪಾರಸ್ಕರ್ ಪ್ರಕಟಿಸಿದ್ದಾರೆ. ಈ ಸಂಘ ನಾಲ್ಕು ಲಕ್ಷ ಉದ್ಯೋಗಿಗಳನ್ನು ಸದಸ್ಯರನ್ನಾಗಿ ಹೊಂದಿದೆ.

ದೇಶಾದ್ಯಂತ 1.8 ಲಕ್ಷ ಸದಸ್ಯರನ್ನು ಹೊಂದಿರುವ ಆಲ್ ಇಂಡಿಯಾ ಗ್ರಾಮೀಣ ಡಾಕ್ ಸೇವಕ್ ಯೂನಿಯನ್ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ವಾರದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಬೆನ್ನಲ್ಲೇ ಅಂಚೆ ಉದ್ಯೋಗಿಗಳ ಸಂಘ ಕೂಡಾ ಇದಕ್ಕೆ ಬೆಂಬಲಾರ್ಥವಾಗಿ ಮುಷ್ಕರಕ್ಕೆ ಕರೆ ನೀಡಿದೆ.

'ಜಿಡಿಎಸ್ ಸಮಿತಿ ಕಳೆದ ನವೆಂಬರ್‌ನಲ್ಲಿ ವರದಿ ಸಲ್ಲಿಸಿ, ಗ್ರಾಮೀಣ ಅಂಚೆ ಸೇವಕರ ಕಲ್ಯಾಣಕ್ಕೆ ಹಲವು ಕ್ರಮಗಳನ್ನು ಶಿಫಾರಸ್ಸು ಮಾಡಿದೆ. ಆದರೆ ಆಡಳಿತ ವರ್ಗ ಯಾವುದೇ ಸಕಾರಣಗಳಿಲ್ಲದೇ ಇದನ್ನು ತಡೆಹಿಡಿದಿದೆ' ಎಂದು ಪಾರಸ್ಕರ್ ಹೇಳಿದ್ದಾರೆ.

ಗ್ರಾಮೀಣ ಅಂಚೆ ಸಿಬ್ಬಂದಿಯ ಮೂಲವೇತನವನ್ನು ಶೇಕಡ 2.5ರಷ್ಟು ಹೆಚ್ಚಿಸುವಂತೆ ಸಮಿತಿ ಶಿಫಾರಸ್ಸು ಮಾಡಿತ್ತು. ಇದರ ಜತೆಗೆ ಮಹಿಳಾ ಸಿಬ್ಬಂದಿಗೆ ಹೆರಿಗೆ ರಜೆ ಸೌಲಭ್ಯ, ಕೆಲಸಕ್ಕೆ ಸೂಕ್ತ ಸ್ಥಳಾವಕಾಶ ನೀಡಿಕೆ ಸೇರಿದಂತೆ ಕಾಯಂ ಉದ್ಯೋಗಿಗಳಿಗೆ ನೀಡುವ ಎಲ್ಲ ಸೌಲಭ್ಯವನ್ನು ನೀಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿತ್ತು. ದೇಶದಲ್ಲಿ 1.3 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳು ಸೇರಿದಂತೆ ಒಟ್ಟು 1.55 ಲಕ್ಷ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. 2.7 ಲಕ್ಷ ಗ್ರಾಮೀಣ ಅಂಚೆ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News