ನಟ ಕಮಲ್ ಹಾಸನ್ ವಿರುದ್ಧ ಮಾನನಷ್ಟ ಪ್ರಕರಣ

Update: 2017-08-22 06:39 GMT

ಚೆನ್ನೈ,ಆ.22 : ಟಿವಿ ಶೋ ಬಿಗ್ ಬಾಸ್ ಇದರ ಜುಲೈ 14ರ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅವಮಾನಿಸಿದ್ದಾರೆಂದು ಆರೋಪಿಸಿ ನಟ ಕಮಲ್ ಹಾಸನ್ ವಿರುದ್ಧ ಇಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.  ವೆಲ್ಲಲರ್ ಸಮುದಾಯದ ನಾಯಕ ಜೆ ಆರ್ ಕುಹೇಶ್ ಎಂಬವರು ದೂರುದಾರರಾಗಿದ್ದು ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 1 ತಾರೀಕಿಗೆ ನಿಗದಿ ಪಡಿಸಿದೆ.

ಇಸೈ ವೆಲ್ಲಲರ್ ಸಮುದಾಯದ ಮಂದಿ ದೇವರಂತೆ ನಂಬುವಂತಹ ನಾದಸ್ವರಂ ಸಂಗೀತ ಉಪಕರಣವನ್ನು ಬಿಗ್ ಬಾಸ್ ಸರಣಿಯ ಕಾರ್ಯಕ್ರಮದಲ್ಲಿ ನಟ ಶಕ್ತಿ ಒಂದು ಕೈಯ್ಯಿಂದ ಇನ್ನೊಂದು ಕೈಗೆ ಎಸೆಯುತ್ತಿರುವುದರ ಬಗ್ಗೆ  ಕುಹೇಶ್ ತಮ್ಮ ಅಪೀಲಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಾಳುಗಳು ಆಹಾರ ಸೇವಿಸುತ್ತಿದ್ದಾಗ ನಾದಸ್ವರ ಉಪಕರಣವನ್ನು ಡೈನಿಂಗ್ ಟೇಬಲಿನಲ್ಲಿರಿಸಲಾಗಿತ್ತು ಇದು ಅಪಮಾನಕಾರಿಯಲ್ಲದೆ ಇಸೈ ವೆಲ್ಲಲರ್ ಸಮುದಾಯವನ್ನೂ ಅವಮಾನಿಸಿದಂತೆ ಎಂದು ದೂರುದಾರರು ಆರೋಪಿಸಿದ್ದಾರೆ.

ನಾದಸ್ವರಂಗೆ ಅವಮಾನಿಸುವುದರಿಂದ ವೆಲ್ಲಲರ್ ಸಮುದಾಯವನ್ನೂ ಅವಮಾನಿಸಿದಂತೆ ಎಂದು  ಟಿವಿ ವಾಹಿನಿ, ನಟರಾದ ಕಮಲ್ ಹಾಸನ್ ಹಾಗೂ ಶಕ್ತಿ ಅವರಿಗೆ  ಗೊತ್ತಿತ್ತು ಎಂದು ಹೇಳಿದ ಅರ್ಜಿದಾರ  ಕಮಲಹಾಸನ್ ಕೂಡಾ ಈ ನಿಟ್ಟಿನಲ್ಲಿ ಕ್ಷಮಾಪಣೆ ಕೇಳಿಲ್ಲ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ನಾದಸ್ವರಂ ಅನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶವನ್ನು ಚಾನೆಲ್ ಹೊಂದಿತ್ತೆಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News