ಜನಪರ ಕಾರ್ಯಗಳಿಂದಾಗಿ ನಾಡಪ್ರಭು ಕೆಂಪೇಗೌಡರ ಹೆಸರು ಚಿರಸ್ಥಾಯಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

Update: 2017-08-22 19:03 GMT

ದಾವಣಗೆರೆ,ಆ.22  : ಸಮಾಜ ಸುಧಾರಣೆ ಮತ್ತು ಜನಪರ ಕಾರ್ಯಕ್ರಮಗಳಿಂದಾಗಿ ನೂರಾರು ವರ್ಷಗಳ ನಂತರವೂ ನಾಡಪ್ರಭು ಕೆಂಪೇಗೌಡ ಅವರ ಹೆಸರು ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ನುಡಿದರು.

ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜಯನಗರದ ಸಾಮಂತರಾಗಿದ್ದ ಕೆಂಪೇಗೌಡರು ಒಬ್ಬ ಉತ್ತಮ ಸಮಾಜ ನಿರ್ಮಾತೃವಾಗಿದ್ದರು. 1537 ರಲ್ಲಿ ಬೆಂಗಳೂರು ನಗರವನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿ ಕಟ್ಟಿದರು. ಬೆಂಗಳೂರು ನಗರದಲ್ಲಿ 9 ದೊಡ್ಡ ಕೆರೆಗಳನ್ನು ನಿರ್ಮಿಸಿದರು. ವಾಣಿಜ್ಯ ನಗರಿಯನ್ನಾಗಿಸುವ ಉದ್ದೇಶದಿಂದ 54 ಪೇಟೆಗಳನ್ನು ನಿರ್ಮಿಸಿದ್ದು ಆ ಪೇಟೆ ಮತ್ತು ಕೆರೆಗಳೂ ಇಂದಿಗೂ ಸುಸ್ಥಿತಿಯಲ್ಲಿವೆ. ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಇವರ ಮುಖ್ಯ ಉದ್ದೇಶವಾಗಿದ್ದು, ಕೆರೆಗಳು, ಕೋಟೆ ಕೊತ್ತಲಗಳು, ಸಾಲುಮರಗಳು ಮತ್ತು ಶಿಲಾನ್ಯಾಸಗಳನ್ನು ಕಟ್ಟಿಸಿದರು. ಕೆಂಪೇಗೌಡರು ಅಪಾರ ದೈವಭಕ್ತರೂ ಆಗಿದ್ದರು. ಗವಿ ಗಂಗಾಧರ, ದೊಡ್ಡಬಸವಸಣ್ಣನ ಗುಡಿ, ಹರಿಹರೇಶ್ವರ ಸೇರಿದಂತೆ ಅನೇಕ ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿಸಿದರು. ಉತ್ತಮ ಸಮಾಜ ಸುಧಾರಕರಾಗಿದ್ದ ಇವರು ಸರ್ವಧರ್ಮ ಆಶ್ರಯದಾತರಾಗಿದ್ದರು. ಜನಪರ ಕಾಳಜಿ ಮತ್ತು ಕಾರ್ಯಗಳಿಂದಾಗಿ ಇಂದಿಗೂ ಎಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದರು.

ಪ್ರಸ್ತುತ ನಮ್ಮ ಸರ್ಕಾರವೂ ವಕ್ಕಲಿಗ ಸಮುದಾಯದವರಿಗೆ ಹಾಸ್ಟೆಲ್, ಬ್ಯಾಂಕ್, ದೇವಸ್ಥಾನ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಡೊಂಡಿದೆ. ಜಿಲ್ಲೆಯಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಸಮುದಾಯಕ್ಕೆ ಲೇಔಟ್ ನಿರ್ಮಿಸಿಕೊಳ್ಳಲು ನಗರದಲ್ಲಿ ಜಾಗ ನೀಡಲಾಗಿದ್ದು, ಶೀಘ್ರದಲ್ಲೇ ನಿವೇಶನ ದರವನ್ನು ಆದಷ್ಟು ಕಡಿಮೆ ಮಾಡಿ ನಿಗದಿಗೊಳಿಸಲಾಗುವುದು. ವಿಮಾನ ನಿಲ್ದಾಣದ ಪ್ರಸ್ತಾಪಕ್ಕೆ ತಮ್ಮ ಸಹಮತವಿದ್ದು ಸಮುದಾಯದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪತ್ರಕರ್ತರದ ಬಿ ಎನ್ ಮಲ್ಲೇಶ್ ಉಪನ್ಯಾಸ ನೀಡಿ ಮಾತನಾಡಿ,  ಯಲಹಂಕ ನಾಡಿನ ದೊರೆ ಕಂಪನಂಜೇಗೌಡರ ಪುತ್ರನಾದ ಕೆಂಪೇಗೌಡರ ಹೆಸರು ಇತಿಹಾಸ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಅವರು ಮಾಡಿದ ಜನಪರ ಕಾರ್ಯಗಳು ಮತ್ತು ಸುಧಾರಣೆಗಳು ಕಾರಣ. ಕೆರೆ ಮತ್ತು ಬಾವಿ ಕಟ್ಟಿಸುವವರು ಉತ್ತಂಗಕ್ಕೇರಿದ ಚರಿತ್ರೆ ಇದೆ. ಅದೇ ರೀತಿ ಕೆಂಪೇಗೌಡರು ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಿಸಿದ್ದರು. ಜಿಲ್ಲೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು ಕುಂದುವಾಡ ಕೆರೆ ಕಟ್ಟಿಸಿ ಜನರಿಗೆ ತುಂಬಾ ಅನುಕೂಲ ಮಾಡಿಕೊಟ್ಟಿದ್ದಾರೆ.

96 ಸಾವಿರ ನಾಡುಗಳನ್ನಾಡಿದ ಗಂಗರ ವಂಶಸ್ಥರಾದ ಕೆಂಪೇಗೌಡರು ವಿಜಯನಗರದ ಶ್ರೀಕೃಷ್ಣದೇವರಾಯರ ಸಮಕಾಲೀನರು ಮತ್ತು ವಿಜಯನಗರ ಸಾಮ್ರಾಜ್ಯ ಗಟ್ಟಿಯಾಗಿ ನಿಲ್ಲಲು ಕಾರಣರಾದವರು. 1510 ರಲ್ಲಿ ಜನಿಸಿದ ಕೆಂಪೇಗೌಡರು 1532 ರಲ್ಲಿ ಪಟ್ಟಾಭಿಷೇಕವಾಗಿ, 1537 ರಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದರು. ನಗರದಲ್ಲಿ ಸುರಕ್ಷತೆಯ ದೃಷ್ಟಿಯಿಂದ 9 ಮಹಾದ್ವಾರಗಳು, ಕುಡಿಯುವ ನೀರಿನ ವ್ಯವಸ್ಥೆಗಾಗಿ 9 ದೊಡ್ಡ ಕೆರೆಗಳು ವಾಣಿಜ್ಯ ಅಭಿವೃದ್ಧಿಗಾಗಿ 54 ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿದ್ದು ಎಲ್ಲ ವರ್ಗದ ಜನಸಾಮಾನ್ಯರಿಗೂ ಅತ್ಯಂತ ಉಪಯೋಗವಾಯಿತು.

ದೈವಭಕ್ತರೂ ಆಗಿದ್ದ ಇವರು ಅನೇಕ ದೊಡ್ಡ ದೇವಾಲಯಗಳನ್ನು ಕಟ್ಟಿಸಿದರು. ವಕ್ಕಲಿಗ ಸಮಾಜದಲ್ಲಿ ಅಂದು ಹೆಣ್ಣು ಮಕ್ಕಳು ಮದುವೆ ಆಗಬೇಕಾದಾಗ ತಮ್ಮ ಕಿರುಬೆರಳನ್ನು ಕತ್ತರಿಸಬೇಕಿದ್ದ ಅಂಧ ಆಚರಣೆಯನ್ನು ನಿಷೇಧಿಸಿದರು ಎಂದು ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಶಿವಮೂರ್ತಿ ಮಾತನಾಡಿ, ಯುವಪೀಳಿಗೆಗೆ ಚರಿತ್ರೆಯ ಕುರಿತು ಮನನ ಮಾಡಿಸುವ ಸಲುವಾಗಿ ಚರಿತ್ರೆಯನ್ನು ಮೆಲುಕು ಹಾಕುವುದು ತುಂಬಾ ಅವಶ್ಯಕವಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ಕಾರ್ಯವನ್ನು ಶ್ಲಾಘಿಸಿದ ಅವರು ದಾವಣಗೆರೆ ನಗರ ರಾಜ್ಯದ ಕೇಂದ್ರ ಸ್ಥಾನದಲ್ಲಿದೆ. ಇಂತಹ ನಗರ ರಾಜಧಾನಿಯಾಗಬೇಕಿತ್ತು. ನಗರ ವ್ಯಾಪಾರ, ವ್ಯವಹಾರ, ಅಭಿವೃದ್ಧಿ ಸೇರಿದಂತೆ ಎಲ್ಲ ಸ್ತರದಲ್ಲಿ ಉನ್ನತೀಕರಣಗೊಳ್ಳಬೇಕಿದೆ. ವಿಮಾನ ನಿಲ್ದಾಣ ಆಗಬೇಕು ಹಾಗೂ ಬೆಳಗಾಂ ಮತ್ತು ಬೆಂಗಳೂರಿನಲ್ಲಿ ನಡೆಯುವಂತೆ ಇಲ್ಲಿಯೂ ಅಧಿವೇಶನ ನಡೆಯುವಂತೆ ಆಗಬೇಕೆಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಅನಿತಾಬಾಯಿ ಮಾಲತೇಶ್, ಉಪ ಮಹಾಪೌರರಾದ ಮಂಜುಳಮ್ಮ, ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷ ಎಂ ಜೆ ನಾಗರಾಜ್, ಜಿಲ್ಲಾಧಿಕಾರಿ ಡಿ ಎಸ್ ರಮೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್ ಗುಳೇದ್, ಉಪ ವಿಭಾಗಾಧಿಕಾರಿ ಸಿದ್ದೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜ ಬಾಂಧವರು ಮತ್ತಿತರರು ಹಾಜರಿದ್ದರು. ರಾಮೇಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News