ರೈತರಿಗೆ ಆಗುತ್ತಿರುವ ಶೋಷಣೆಗಳನ್ನು ತಪ್ಪಿಸಬೇಕು: ಸಚಿವ ಟಿ.ಬಿ.ಜಯಚಂದ್ರ

Update: 2017-08-22 17:02 GMT

ತುಮಕೂರು, ಆ.22: ದಿನೇ ದಿನೇ ತುಮಕೂರು ನಗರ ವಿಸ್ತರಣೆಯಾಗುತ್ತಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶವು ಕಿರಿದಾಗಿ ಮಾರುಕಟ್ಟೆ ವ್ಯವಸ್ಥೆಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ನಗರದ ನಾಲ್ಕೂ ದಿಕ್ಕುಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಲು ಸರಕಾರಿ ಜಾಗವನ್ನು ಗುರುತಿಸಿ ಕಾಯ್ದಿರಿಸಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸಲಹೆ ನೀಡಿದ್ದಾರೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ನಗರದ ನಾಲ್ಕೂ ಕಡೆ ಮಾರುಕಟ್ಟೆ ಸ್ಥಾಪಿಸಿದಲ್ಲಿ ವಿವಿಧ ತಾಲೂಕುಗಳಿಂದ ಬರುವ ರೈತರಿಗೆ ಅನುಕೂಲವಾಗಲಿದೆ. ಈ ಮಾರುಕಟ್ಟೆಗೆ ಪ್ರತಿ ದಿನ ಬಂದು ಹೋಗುವ ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್, ವಸತಿ, ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಬೆಳೆದ ಫಸಲನ್ನು ಮಾರಾಟ ಮಾಡಲು ಬರುವ ರೈತರಿಗೆ ನ್ಯಾಯಯುತ ಬೆಲೆ ದೊರಕಿಸಲು ಈಗಾಗಲೇ ಇ-ಮಾರುಕಟ್ಟೆ ಜಾರಿಗೊಳಿಸಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ. ಆದರೂ ವರ್ತಕರ ಅಸಹಕಾರದಿಂದ ರೈತರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ.ನ್ಯಾಯಯುತ ಬೆಲೆ ಸಿಗದಿದ್ದರೆ ರೈತರಿಗೆ ಅಡಮಾನ ಸಾಲ ನೀಡುವ ವ್ಯವಸ್ಥೆಯಾಗಬೇಕು. ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗದಂತೆ ಪಾರದರ್ಶಕವಾಗಿ ಮಾರುಕಟ್ಟೆಗಳು ಕಾರ್ಯನಿರ್ವಹಿಸಬೇಕು. ರೈತರಿಗೆ ಆಗುತ್ತಿರುವ ಶೋಷಣೆಗಳನ್ನು ತಪ್ಪಿಸಬೇಕು ಎಂದು ತಿಳಿಸಿದರು.

ನಗರದ ಮಧ್ಯಭಾಗದಲ್ಲಿರುವ ಹಳೆಯ ಸಿದ್ಧಿವಿನಾಯಕ ಮಾರುಕಟ್ಟೆ ಪ್ರದೇಶಕ್ಕೆ ಸಂಬಂಧಿಸಿದಂತೆ ಪಾಲಿಕೆ ಹಾಗೂ ಎಪಿಎಂಸಿ ನಡುವೆ ಇರುವ ವ್ಯಾಜ್ಯವನ್ನು ಹಿಂಪಡೆದು ಆದಷ್ಟು ಬೇಗ ಇತ್ಯರ್ಥಪಡಿಸಿಕೊಂಡು ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಕಡೆ ಸರಕಾರಿ ಜಾಗವನ್ನು ಎಪಿಎಂಸಿಗೆ ನೀಡಲಾಗುವುದೆಂದು ಹೇಳಿದರು.

ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ರೈತರ ಆತ್ಮಹತ್ಯೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಕೃಷಿಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರಿಗೆ ಪ್ರೋತ್ಸಾಹಧನ ಸಿಗದಿದ್ದರೆ ಆತ್ಮಹತ್ಯೆಯಂತಹ ಯೋಚನೆ ಮಾಡುತ್ತಾನೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದಾಗಿ ಇಂದು ರೈತ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಾರಣ ರೈತನಿಗೆ ನ್ಯಾಯಯುತವಾದ ತೂಕ ಮತ್ತು ಬೆಲೆ ದೊರಕುತ್ತಿದೆ. ಅಲ್ಲದೆ ಕರ್ನಾಟಕ ಸರಕಾರ ಇಡೀ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಇ-ಮಾರ್ಕೇಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದರಿಂದ ಇಡೀ ರಾಜ್ಯದಲ್ಲಿ ಎಲ್ಲಿ ಯಾವ ವಸ್ತುವಿಗೆ ಬೆಲೆ ನಿಗಧಿಯಾಗಿದೆ ಎಂಬುದು ಕ್ಷಣಮಾತ್ರ ದಲ್ಲಿಯೇ ಗೊತ್ತಾಗುವುದರಿಂದ ರೈತ ಬೆಲೆಯಲ್ಲಿ ಮೋಸ ಹೋಗುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದರಿಂದಾಗಿ ರೈತರು ಇಂದು ಹೆಚ್ಚುಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 180 ವೈಜ್ಞಾನಿಕ ದಾಸ್ತಾನು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರೈತರ ಬೆಳೆಗಳು ಬೆಲೆ ಕಡಿಮೆ ಇದ್ದಾಗ ಅವುಗಳನ್ನು ಕೋಲ್ಡ್ ಸ್ಟೋರೇಜ್‍ಗಳಲ್ಲಿ ಕಾಪಿಡಲು ಈಗಾಗಲೇ 1000 ಮೆಟ್ರಿಕ್ ಟನ್ ಸಾಮರ್ಥ್ಯ ಕೋಲ್ಡ್ ಸ್ಟೋರೇಜ್‍ನ್ನು ಎರಡು ಕಡೆ ಸ್ಥಾಪಿಸಲು ರಾಜ್ಯ ಸರಕಾರ ಮುಂದೆ ಬಂದಿದ್ದು, ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಯವರು ಈ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದಲ್ಲಿ ಈ ಬಗ್ಗೆ ಸರಕಾರದ ಜೊತೆಗೆ ಮಾತನಾಡಿ ಮಂಜೂರಾತಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಎಪಿಎಂಸಿ ಜಂಟಿ ನಿರ್ದೇಶಕ ಡಾ.ಕೆ.ಕೋಡಿಗೌಡ, ಎಪಿಎಂಸಿ ಅಧ್ಯಕ್ಷ ಆರ್.ಗಂಗಾಧರಯ್ಯ, ಉಪಾಧ್ಯಕ್ಷ ತಿರುಮಲಯ್ಯ, ಸದಸ್ಯರುಗಳಾದ ಯೋಗೀಶ್ ಕೆ.ಎಂ.,ಮೊಹಮ್ಮದ್ ಬುಡೇನ್, ಯದುನಂದಕುಮಾರ್ ಎಚ್.ಎನ್., ಚಂದ್ರಕಲಾ, ಟಿ.ಆರ್.ಸುರೇಶ್, ಪುಟ್ಟಮ್ಮ, ಎನ್.ಡಿ.ನರಸೇಗೌಡ, ಕೆ.ಸಿ.ದೊರೆಸ್ವಾಮಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News