ಬಾಂಗ್ಲಾದ ಸ್ಪಿನ್ ಸಲಹೆಗಾರರಾಗಿ ಸುನೀಲ್

Update: 2017-08-22 18:46 GMT

ಢಾಕಾ, ಆ.22: ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಸುನೀಲ್ ಜೋಶಿ ಅವರನ್ನು ತಂಡದ ಸ್ಪಿನ್ ಸಲಹೆಗಾರರಾಗಿ ಆಯ್ಕೆ ಮಾಡಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಮಂಗಳವಾರ ಘೋಷಿಸಿದೆ. ಆಸ್ಟ್ರೇಲಿಯದ ಸ್ಟುವರ್ಟ್ ಮೆಕ್‌ಗಿಲ್ ಸ್ಪಿನ್ ಕೋಚ್ ಹುದ್ದೆಯ ಆಫರ್‌ನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜೋಶಿಯವರನ್ನು ಬಿಸಿಬಿ ಆಯ್ಕೆ ಮಾಡಿದೆ.

‘‘ಮಾಜಿ ಎಡಗೈ ಸ್ಪಿನ್ನರ್ ಜೋಶಿ ರವಿವಾರ ಢಾಕಾದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮೊದಲು ಬೌಲಿಂಗ್ ಕೋಚ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಬಿಸಿಬಿ ವಕ್ತಾರ ಜಲಾಲ್ ಯೂನುಸ್ ತಿಳಿಸಿದ್ದಾರೆ.

 ಒಂದು ದಶಕದ ಬಳಿಕ ಬಾಂಗ್ಲಾದೇಶಕ್ಕೆ ಟೆಸ್ಟ್ ಸರಣಿಯನ್ನು ಆಡಲು ಆಗಮಿಸಿರುವ ಆಸ್ಟ್ರೇಲಿಯ ವಿರುದ್ಧ ಅವರದೇ ದೇಶದ ಮೆಕ್‌ಗಿಲ್‌ರನ್ನು ತಂಡದ ಕೋಚ್ ವಿಭಾಗಕ್ಕೆ ಸೇರಿಸಿಕೊಳ್ಳಲು ಬಾಂಗ್ಲಾದೇಶ ಯೋಜನೆ ಹಾಕಿಕೊಂಡಿತ್ತು. ಆಸೀಸ್‌ನ ಪರ 44 ಟೆಸ್ಟ್‌ಗಳಲ್ಲಿ 208 ವಿಕೆಟ್‌ಗಳನ್ನು ಕಬಳಿಸಿರುವ ಮಾಜಿ ಲೆಗ್ ಸ್ಪಿನ್ನರ್ ಮೆಕ್‌ಗಿಲ್ ವೈಯಕ್ತಿಕ ಕಾರಣದಿಂದ ಬಾಂಗ್ಲಾದೇಶದ ಆಫರ್‌ನ್ನು ತಿರಸ್ಕರಿಸಿದ್ದರು. ಈ ಹಿಂದೆ ಶ್ರೀಲಂಕಾದ ಮಾಜಿ ಆಟಗಾರ ರುವಾನ್ ಕಲ್ಪಗೆ ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ಕಳೆದ ವರ್ಷ ಕೋಚ್ ಹುದ್ದೆಯನ್ನು ತ್ಯಜಿಸಿದ್ದರು.

ಗದಗ ಮೂಲದ ಜೋಶಿ ಭಾರತದ ಪರ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 160 ಪ್ರಥಮ ದರ್ಜೆ ಪಂದ್ಯಗಳಲ್ಲಿ 615 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2000ರಲ್ಲಿ ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಉದ್ಘಾಟನಾ ಟೆಸ್ಟ್ ಪಂದ್ಯ ಆಡಿದ್ದಾಗ ಜೋಶಿ 92 ರನ್ ಗಳಿಸಿದ್ದಲ್ಲದೆ 8 ವಿಕೆಟ್‌ಗಳನ್ನು ಕಬಳಿಸಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಅವರು ಆಡಿರುವ 15 ಟೆಸ್ಟ್‌ನಲ್ಲಿ ಇದು ಜೀವನಶ್ರೇಷ್ಠ ಸಾಧನೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News