ಸ್ಯಾಮ್ಸನ್, ಧ್ರುವ್ ಜುರೆಲ್ ಅರ್ಧಶತಕ | ಗೆಲುವಿನ ಓಟ ಮುಂದುವರಿಸಿದ ರಾಜಸ್ಥಾನ ರಾಯಲ್ಸ್

Update: 2024-04-27 18:01 GMT

PC : X/@IPL

ಲಕ್ನೊ : ನಾಯಕ ಸಂಜು ಸ್ಯಾಮ್ಸನ್(ಔಟಾಗದೆ 71, 33 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಧ್ರುವ್ ಜುರೆಲ್ (ಔಟಾಗದೆ 52, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ನಡೆದ ಐಪಿಎಲ್‌ನ 44ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು 7 ವಿಕೆಟ್ ಅಂತರದಿಂದ ಮಣಿಸಿ ಟೂರ್ನಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿದೆ.

ತಾನಾಡಿದ 9ನೇ ಪಂದ್ಯದಲ್ಲಿ 8ನೇ ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಗೆಲ್ಲಲು 197 ರನ್ ಗುರಿ ಪಡೆದ ರಾಜಸ್ಥಾನ ತಂಡ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ರಾಜಸ್ಥಾನ 78 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ 4ನೇ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿದ ಸ್ಯಾಮ್ಸನ್ ಹಾಗೂ ಜುರೆಲ್ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲ ವಿಕೆಟ್‌ಗೆ 60 ರನ್ ಸೇರಿಸಿದ ಜೋಸ್ ಬಟ್ಲರ್(34 ರನ್, 18 ಎಸೆತ) ಹಾಗೂ ಯಶಸ್ವಿ ಜೈಸ್ವಾಲ್(24 ರನ್, 18 ಎಸೆತ)ಉತ್ತಮ ಆರಂಭ ಒದಗಿಸಿದರು. ಆದರೆ ಬಟ್ಲರ್ ಹಾಗೂ ಜೈಸ್ವಾಲ್ ಬೆನ್ನುಬೆನ್ನಿಗೆ ಔಟಾದರು.

ರಿಯಾನ್ ಪರಾಗ್(14 ರನ್)ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ ಜೊತೆಯಾದ ಸ್ಯಾಮ್ಸನ್ ಹಾಗೂ ಜುರೆಲ್ ಶತಕದ ಜೊತೆಯಾಟದಿಂದ ರಾಜಸ್ಥಾನಕ್ಕೆ ಟೂರ್ನಿಯಲ್ಲಿ 8ನೇ ಗೆಲುವು ತಂದುಕೊಟ್ಟರು.

ಲಕ್ನೊ 196/5: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೊ ತಂಡ ನಾಯಕ ಕೆ.ಎಲ್.ರಾಹುಲ್ (75 ರನ್, 48 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಆಲ್‌ರೌಂಡರ್ ದೀಪಕ್ ಹೂಡಾ(50 ರನ್, 31 ಎಸೆತ)ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.

ಇನಿಂಗ್ಸ್‌ನ 3ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(8 ರನ್)ವಿಕೆಟನ್ನು ಕಳೆದುಕೊಂಡ ಲಕ್ನೊ ಕಳಪೆ ಆರಂಭ ಪಡೆದಿತ್ತು. ಮಾರ್ಕಸ್ ಸ್ಟೋಯಿನಿಸ್ ರನ್ ಖಾತೆ ತೆರೆಯುವ ಮೊದಲೇ ಸಂದೀಪ್ ಶರ್ಮಾಗೆ ಕ್ಲೀನ್‌ಬೌಲ್ಡಾದರು. ಆಗ ಲಕ್ನೊದ ಸ್ಕೋರ್ 2ಕ್ಕೆ11.

ಸಂಕಷ್ಟದ ಸಮಯದಲ್ಲಿ ಜೊತೆಯಾದ ರಾಹುಲ್ ಹಾಗೂ ದೀಪಕ್ 3ನೇ ವಿಕೆಟ್‌ಗೆ 115 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಹೂಡಾ ವಿಕೆಟನ್ನು ಉರುಳಿಸಿದ ಆರ್.ಅಶ್ವಿನ್ (1-39) ಶತಕದ ಜೊತೆಯಾಟವನ್ನು ಮುರಿದರು. ಈ ಇಬ್ಬರು ಬೇರ್ಪಟ್ಟ ನಂತರ ಲಕ್ನೊ ತಂಡ ಉತ್ತಮ ಜೊತೆಯಾಟ ನಡೆಸಲಿಲ್ಲ.

ನಿಕೊಲಸ್ ಪೂರನ್(11 ರನ್, 11 ಎಸೆತ) ಬೇಗನೆ ಔಟಾದರು. ಅವೇಶ್ ಖಾನ್ 18ನೇ ಓವರ್‌ನಲ್ಲಿ ರಾಹುಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.

ಆಯುಷ್ ಬದೋನಿ(ಔಟಾಗದೆ 18, 13 ಎಸೆತ)ಹಾಗೂ ಕೃನಾಲ್ ಪಾಂಡ್ಯ(ಔಟಾಗದೆ 15, 11 ಎಸೆತ) ಲಕ್ನೊದ ಸ್ಕೋರನ್ನು 200ರ ಗಡಿ ತಲುಪಿಸಿದರು.

ರಾಜಸ್ಥಾನದ ಪರ ಸಂದೀಪ್ ಶರ್ಮಾ(2-31) ಯಶಸ್ವಿ ಪ್ರದರ್ಶನ ನೀಡಿದರು. ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್(1-41) ಹಾಗೂ ಅವೇಶ್ ಖಾನ್(1-42) ತಲಾ ಒಂದು ವಿಕೆಟ್ ಪಡೆದರು.

14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ತನ್ನ ಪ್ರಾಬಲ್ಯ ಮುಂದುವರಿಸಲು ಬಯಸಿದ್ದು ತನ್ನ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: 19 ಓವರ್‌ಗಳಲ್ಲಿ 199/3

( ಸಂಜು ಸ್ಯಾಮ್ಸನ್ ಔಟಾಗದೆ 71, (ಧ್ರುವ್ ಜುರೆಲ್ ಔಟಾಗದೆ 52ಜೋಸ್ ಬಟ್ಲರ್ 34, ಸ್ಟೋನಿಸ್ 1-3, ಅಮಿತ್ ಮಿಶ್ರಾ 1-20)

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News