ಇಂಧನ ಬೆಲೆಯಲ್ಲಿ ಶೌಚಾಲಯ ನಿಧಿಯೂ ಸೇರಿದೆ!

Update: 2017-08-23 04:04 GMT

ಹೊಸದಿಲ್ಲಿ, ಆ.23: ಪ್ರತೀ ಬಾರಿ ನೀವು ಡೀಸೆಲ್ ಅಥವಾ ಪೆಟ್ರೋಲ್ ಖರೀದಿಸುವಾಗ, ಕ್ರಮವಾಗಿ ನೀವು 6 ಪೈಸೆ ಹಾಗೂ 4 ಪೈಸೆಯನ್ನು ಪೆಟ್ರೋಲ್ ಪಂಪ್‌ಗಳಲ್ಲಿ ಉತ್ತಮ ಶೌಚಾಲಯ ವ್ಯವಸ್ಥೆಗಾಗಿ ಪಾವತಿ ಮಾಡುತ್ತಿರುತ್ತೀರಿ ಎನ್ನುವುದು ನಿಮಗೆ ಗೊತ್ತೇ?

ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯ ನಿರ್ವಹಣೆಗೆ ಆದಾಯ ಸೃಷ್ಟಿಸುವ ಸಲುವಾಗಿ ಪೆಟ್ರೋಲಿಯಂ ಸಚಿವಾಲಯ ಹಾಗೂ ಪೆಟ್ರೋಲ್‌ ಬಂಕ್ ಮಾಲಕರು ಈ ವ್ಯವಸ್ಥೆ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಶೌಚಾಲಯ ನಿರ್ವಹಣೆಗೆ ಆ ಮೊತ್ತ ಸಾಕಾಗುತ್ತಿಲ್ಲ ಎನ್ನುವುದು ಮಾಲಕರ ಅಳಲು.

ಪೆಟ್ರೋಲ್ ಪಂಪ್‌ಗಳ ಹಂಚಿಕೆ ವೇಳೆ, ಸೂಕ್ತ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹೊಂದಿರುವುದು ಕಡ್ಡಾಯ ಎಂದು ಸೂಚಿಸಲಾಗುತ್ತದೆ. ಸೂಕ್ತವಾಗಿ ಶೌಚಾಲಯ ನಿರ್ವಹಿಸದ ಪಂಪ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಅಧಿಕಾರಿಗಳು ಹೇಳುತ್ತಾರೆ.

"ಶೌಚಾಲಯ ನಿರ್ವಹಣೆಗೆ ಈ ನಿಧಿ ಸಾಕಾಗುತ್ತಿಲ್ಲ ಎಂಬ ವಾದ ಸಮರ್ಥನೀಯವಾದರೂ, ಅವರಿಗೆ ಇತರ ಕಮಿಷನ್ ಸಾಕಷ್ಟು ಸಿಗುತ್ತದೆ. ಆದ್ದರಿಂದ ಅವರು ಶೌಚಾಲಯ ನಿರ್ವಹಿಸುವುದು ಕಡ್ಡಾಯ. ಇದಕ್ಕೆ ತಪ್ಪಿದಲ್ಲಿ ಗ್ರಾಹಕರು ಸ್ವಚ್ಛತಾ ಆ್ಯಪ್‌ಗೆ ದೂರು ನೀಡಬಹುದು" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News