ತನಗಿಂತ ಹೆಚ್ಚು ಅಂಕ ಗಳಿಸಿದ್ದ ಸಹಪಾಠಿಗೆ ವಿಷ ಕುಡಿಸಿದ ಬಾಲಕಿ

Update: 2017-08-24 11:01 GMT

ಸತ್ನಾ(ಮ.ಪ್ರ),ಆ.24: ಪರೀಕ್ಷೆಯಲ್ಲಿ ತನಗಿಂತ ಹೆಚ್ಚಿನ ಅಂಕಗಳನ್ನು ಪಡೆದ ಮತ್ಸರದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯೋರ್ವಳು ತನ್ನ ಸಹಪಾಠಿಯ ನೀರಿನ ಬಾಟ್ಲಿಯಲ್ಲಿ ಸೊಳ್ಳೆ ನಿವಾರಕ ರಾಸಾಯನಿಕನ್ನು ಬೆರೆಸಿ ಆಕೆಯನ್ನು ಕೊಲ್ಲಲು ಯತ್ನಿಸಿದ ಘಟನೆ ಸತ್ನಾದಲ್ಲಿ ನಡೆದಿದೆ. ಬಳಿಕ ಪೊಲೀಸರ ವಿಚಾರಣೆಯ ಭಯದಿಂದ ಈ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರಸ್ಥಿತಿಯಲ್ಲಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ರಾಸಾಯನಿಕ ಬೆರೆತಿದ್ದ ನೀರನ್ನು ಸೇವಿಸಿದ್ದ ಹುಡುಗಿ ಅಸ್ವಸ್ಥಗೊಂಡು ವಾಂತಿ ಮಾಡಿಕೊಳ್ಳತೊಡಗಿದಾಗ ಶಿಕ್ಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಕೆಯ ದೇಹಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

13-14ರ ಹರೆಯದ ಈ ಇಬ್ಬರೂ ಬಾಲಕಿಯರು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಆರೋಪಿ ಬಾಲಕಿಯು ತನ್ನ ಸಹಪಾಠಿಯ ನೀರಿನ ಬಾಟ್ಲಿಯಲ್ಲಿ ಸೊಳ್ಳೆ ನಿವಾರಕ ರಾಸಾಯನಿಕವನ್ನು ಬೆರೆಸುತ್ತಿರುವ ಮತ್ತು ಬಳಿಕ ತಾನು ಆ ರಾಸಾಯನಿಕವನ್ನು ತಂದಿದ್ದ ಬಾಟ್ಲಿಯನ್ನು ಇನ್ನೋರ್ವ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಬಚ್ಚಿಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಸೋಮವಾರ ಈ ಘಟನೆ ನಡೆದಿದ್ದು, ಪೊಲೀಸರು ತನ್ನನ್ನು ವಿಚಾರಣೆಗೊಳಪಡಿಸ ಬಹುದು ಎಂಬ ಭಯದಿಂದ ಆರೋಪಿ ಬಾಲಕಿ ಮಂಗಳವಾರ ತನ್ನ ಮನೆಯಲ್ಲಿ ಸೊಳ್ಳೆ ನಿವಾರಕ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News