ಚಿಕುನ್ ಗುನ್ಯಾ-ಡೆಂಗ್ ತುರ್ತು ನಿಯಂತ್ರಣ ಅಗತ್ಯ

Update: 2017-08-24 19:00 GMT

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಗ್ ಹಾಗೂ ಚಿಕುನ್ ಗುನ್ಯಾಗಳು ಹಬ್ಬಿವೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತವೆ. ಇದರ ಪರಿಣಾಮವಾಗಿ ಪ್ರತೀವರ್ಷ ಈ ಎರಡು ಕಾಯಿಲೆಗಳು ಎಲ್ಲೆಡೆ ಹಬ್ಬುತ್ತಿವೆ. ಇದು ಕರ್ನಾಟಕವನ್ನು ಮಾತ್ರವಲ್ಲ ಇಡೀ ದೇಶವನ್ನೇ ಕಾಡುವ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಹೇಳುವುದಾದರೆ ಜಗತ್ತಿನಾದ್ಯಂತ ಡೆಂಗ್ ವ್ಯಾಧಿ ಹಬ್ಬುತ್ತಲೇ ಇದೆ. ವಿಶ್ವದ ಅರ್ಧಕ್ಕಿಂತ ಹೆಚ್ಚು ಜನ ಇದರ ಬಾಧೆಗೆ ಒಳಗಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಇವೆರಡು ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಸರಕಾರಿ ದಾಖಲೆಗಳ ಪ್ರಕಾರ ಇಪ್ಪತ್ತು ಸಾವಿರಕ್ಕೂ ಹೆಚ್ಚು ಚಿಕುನ್ ಗುನ್ಯಾ ಹಾಗೂ ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಚಿಕುನ್ ಗುನ್ಯಾ ಹಾಗೂ 10 ಸಾವಿರಕ್ಕೂ ಹೆಚ್ಚು ಡೆಂಗ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲೇ ಈ ಎರಡು ಕಾಯಿಲೆಗಳಲ್ಲಿ ಕರ್ನಾಟಕ ಮೊದಲ ಹಾಗೂ ದ್ವಿತೀಯ ಸ್ಥಾನದಲ್ಲಿದೆ.

ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಪ್ರಕಾರ ಕರ್ನಾಟಕದಲ್ಲಿ 12,364 ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಡೆಂಗ್‌ನಲ್ಲೂ ಅತೀ ಹೆಚ್ಚು ಕಾಯಿಲೆ ಪೀಡಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೇರಳ ಇದ್ದರೆ, ಎರಡನೆ ಸ್ಥಾನದಲ್ಲಿ ಕರ್ನಾಟಕವಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಎರಡೂ ಕಾಯಿಲೆಗಳು ತೀವ್ರವಾಗಿ ಹಬ್ಬುತ್ತಿವೆ. ಉಳಿದಂತೆ ಬೀದರ್, ಕಲಬುರಗಿ, ದಾವಣಗೆರೆ, ರಾಯಚೂರು, ವಿಜಯಪುರ, ಮಂಡ್ಯ ಹಾಗೂ ಹಾಸನಗಳಲ್ಲಿ ಈ ಕಾಯಿಲೆ ತೀವ್ರ ಸ್ವರೂಪದಲ್ಲಿ ಹಬ್ಬುತ್ತಿದೆ. ಸರಕಾರ ಪ್ರಕಟಿಸಿದ ಅಂಕಿಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಈ ಎರಡೂ ಕಾಯಿಲೆಗಳ ಪೀಡಿತರ ಸಂಖ್ಯೆಯನ್ನು ನಿಖರವಾಗಿ ಹೇಳಲು ಬರುವುದಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆಯನ್ನು ಆಧರಿಸಿ ಮಾತ್ರ ಸರಕಾರ ಪ್ರಕಟನೆ ನೀಡುತ್ತದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ವಿವರಗಳು ಸರಕಾರ ಪ್ರಕಟಿಸಿದ ಅಂಕಿಂಶಗಳಲ್ಲಿ ನಮೂದಾಗಿರುವುದಿಲ್ಲ.

ಅಂತಲೇ ಈ ಎರಡೂ ಕಾಯಿಲೆಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುರಿಯಾಗಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಡೆಂಗ್ ಪೀಡಿತರಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿ ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಚಿಕುನ್ ಗುನ್ಯಾ ಮತ್ತು ಡೆಂಗ್ ಕಾಯಿಲೆಗಳ ನಿಯಂತ್ರಣಕ್ಕೆ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಈ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸೊಳ್ಳೆಗಳ ಸಂತಾನವನ್ನು ನಿಯಂತ್ರಿಸದಿದ್ದರೆ ಈ ಕಾಯಿಲೆ ಹಬ್ಬುವುದನ್ನು ತಡೆಯಲು ಸಾಧ್ಯವಿಲ್ಲ. ಎರಡೂ ಕಾಯಿಲೆಗಳಿಗೆ ನಿರ್ದಿಷ್ಟ ಔಷಧಿ ಅಲೋಪತಿಯಲ್ಲಿ ಇಲ್ಲ. ಇವುಗಳ ನಿಯಂತ್ರಣಕ್ಕೆ ಈ ಕೊರತೆ ಮುಖ್ಯ ಅಡ್ಡಿಯಾಗಿದೆ. ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಈ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಖಚಿತವಾಗಿ ಅಧಿಕೃತವಾಗಿ ತಿಳಿದುಬಂದಿಲ್ಲ.

ಖಾಸಗಿ ಆಸ್ಪತ್ರೆಗಳು ಮತ್ತು ರಕ್ತ ಪರೀಕ್ಷೆ ಮಾಡುವ ಪ್ರಯೋಗಾಲಯಗಳು ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಹೆಚ್ಚಿನ ದರ ನಿಗದಿಪಡಿಸಿ ರೋಗಿಗಳನ್ನು ಶೋಷಣೆ ಮಾಡುತ್ತಿವೆ ಎಂಬ ವರದಿಗಳು ಬರುತ್ತಿವೆ. ಹಾಗಾಗದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ನಗರ ಪ್ರದೇಶದಲ್ಲಿ ಭಾರೀ ಕಟ್ಟಡಗಳು ನಿರ್ಮಾಣವಾಗುತ್ತಿರುವ ಜಾಗಗಳಲ್ಲಿ ಹಾಗೂ ಕೊಳಚೆ ಪ್ರದೇಶಗಳಲ್ಲಿ, ಹೂಳು ತುಂಬಿದ ಚರಂಡಿಗಳಲ್ಲಿ ಈ ಅಪಾಯಕಾರಿ ಸೊಳ್ಳೆಗಳು ಆಸರೆ ಪಡೆಯುತ್ತವೆ. ಅದಕ್ಕೆ ಇಂತಹ ಜಾಗಗಳಲ್ಲಿ ನೀರು ಸಂಗ್ರಹವಾಗದಂತೆ ಸರಕಾರ ಎಚ್ಚರ ವಹಿಸಬೇಕಾಗಿದೆ. ಈ ಕಾಯಿಲೆಗಳು ಹಬ್ಬುವುದನ್ನು ತಡೆಯುವಲ್ಲಿ ಪೌರ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಫಾಗಿಂಗ್ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು.

ಆದರೆ, ನಮ್ಮ ನಗರ ಪಾಲಿಕೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಫಾಗಿಂಗ್ ಯಂತ್ರಗಳು ಇಲ್ಲ. ಹಗಲು ಹೊತ್ತಿನಲ್ಲಿ ಈಡೀಸ್ ಮತ್ತು ಈಜಿಪ್ಟಿ ಎಂಬ ಹೆಸರಿನ ಸೊಳ್ಳೆಗಳ ಕಡಿತದಿಂದ ಡೆಂಗ್ ಹಾಗೂ ಚಿಕುನ್ ಗುನ್ಯಾಗಳು ವ್ಯಾಪಕವಾಗಿ ಹರಡುತ್ತವೆ. ಈ ಕಾಯಿಲೆಗಳ ಲಕ್ಷಣಗಳು ಕಂಡುಬಂದಾಗ ಅವುಗಳನ್ನು ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಜನಸಾಮಾನ್ಯರಿಗೆ ಮಾರಣಾಂತಿಕವಾದ ಈ ಕಾಯಿಲೆಗಳ ಬಗ್ಗೆ ಅರಿವು ಇರುವುದಿಲ್ಲ. ಅವರು ಔಷಧಿ ಅಂಗಡಿಗಳಲ್ಲಿ ಯಾವುದೋ ಮಾತ್ರೆಗಳನ್ನು ಖರೀದಿಸಿ ಅದನ್ನು ನುಂಗಿ ಸುಮ್ಮನಾಗಿ ಬಿಡುತ್ತಾರೆ. ಹೀಗಾಗಿ ಈ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕೆಲವು ಕಡೆ ಸಾವಿನ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಈ ಕಾಯಿಲೆಗಳ ಬಗ್ಗೆ ಸರಕಾರ ಅದರಲ್ಲೂ ಪೌರ ಸಂಸ್ಥೆಗಳು, ಆರೋಗ್ಯ ಇಲಾಖೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಈ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದರೆ ಮಾರಣಾಂತಿಕವಾದ ಈ ಕಾಯಿಲೆಗಳನ್ನು ನಿಯಂತ್ರಿಸಬಹುದು.

ಚಿಕುನ್ ಗುನ್ಯಾ ಹಾಗೂ ಡೆಂಗ್‌ನಂತಹ ಮಾರಣಾಂತಿಕ ಕಾಯಿಲೆಗಳು ಹಬ್ಬಿದಾಗ ಎಲ್ಲವನ್ನೂ ಸರಕಾರವೇ ನಿಭಾಯಿಸಬೇಕೆಂದು ಜನರು ಕೈಚೆಲ್ಲಿ ಕುಳಿತುಕೊಳ್ಳಬಾರದು. ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಬೀದಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ನಾಶಮಾಡಬೇಕು. ಈ ಬಗ್ಗೆ ಜನರಲ್ಲಿ ಆರೋಗ್ಯ ಪ್ರಜ್ಞೆಯನ್ನು ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಆದರೆ, ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ಜನ ಸುಮ್ಮನಿರಬಾರದು. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತ್ತಿದೆ.

ಈ ಕೊರತೆಯನ್ನು ನಿವಾರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣದ ಪ್ರಭಾವ ಹೆಚ್ಚುತ್ತಿರುವುದರಿಂದ ಸಾಮುದಾಯಿಕ ಆರೋಗ್ಯ ರಕ್ಷಣೆಯ ಬಗ್ಗೆ ಸರಕಾರದ ನಿರ್ಲಕ್ಷ ಎದ್ದು ಕಾಣುತ್ತದೆ. ಆದರೆ, ಇಂತಹ ಅಪಾಯಕಾರಿ ರೋಗಗಳು ವ್ಯಾಪಿಸುತ್ತಿರುವಾಗ ಸರಕಾರ ತನ್ನ ಹೊಣೆಯಿಂದ ಜಾರಿಕೊಳ್ಳಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಈ ಸೊಳ್ಳೆಗಳು ಹುಟ್ಟಿಕೊಳ್ಳುವ ತಾಣಗಳನ್ನು ಗುರುತಿಸಿ ನಿರ್ನಾಮ ಮಾಡಬೇಕು.

ಒಡೆದ ಟಯರು, ತೆಂಗಿನ ಚಿಪ್ಪು, ಸಿಮೆಂಟ್ ತೊಟ್ಟಿ, ಏರ್‌ಕೂಲರ್, ಹೂವಿನ ಕುಂಡಗಳ ಕೆಳಗಿನ ಕಟ್ಟೆ, ಡ್ರಮ್ ಹಾಗೂ ಮಡಕೆಯಲ್ಲಿ ನೀರು ಶೇಖರಣೆ ಆಗುವುದನ್ನು ತಡೆಯಬೇಕು. ಸಿಮೆಂಟ್ ತೊಟ್ಟಿ ಹಾಗೂ ಮಡಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಆಗ ಈ ಅಪಾಯಕಾರಿ ಸೊಳ್ಳೆಗಳ ಸಂತಾನೋತ್ಪತಿಗೆ ಸಹಜವಾಗಿ ಕಡಿವಾಣ ಬೀಳುತ್ತದೆ. ಸೊಳ್ಳೆಗಳ ಸಂತಾನವನ್ನು ನಿಯಂತ್ರಿಸದಿದ್ದರೆ ಸರಕಾರ ಯಾವುದೇ ಔಷಧಿಯನ್ನು ನೀಡಿದರೂ ಪ್ರಯೋಜನವಿಲ್ಲ.

ಈ ಅಪಾಯಕಾರಿ ಕಾಯಿಲೆ ನಿಯಂತ್ರಣಕ್ಕೆ ಬಾರದಿರುವುದು ವೈದ್ಯರ ಪಾಲಿಗೂ ಸವಾಲಾಗಿ ಪರಿಣಮಿಸಿದೆ. ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಂತಹ ಹಿಂದುಳಿದ ಪ್ರದೇಶದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ವ್ಯಾಧಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ವ್ಯಾಧಿಯ ಬಗ್ಗೆ ಸುಳ್ಳು ವರದಿ ನೀಡಿ ರೋಗಿಗಳನ್ನು ವಂಚಿಸುವ ಖಾಸಗಿ ಆಸ್ಪತ್ರೆಗಳೂ ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮೈತುಂಬಾ ಎಚ್ಚರವಾಗಿದ್ದು, ಈ ಕಾಯಿಲೆ ಹಬ್ಬದಂತೆ ತಡೆಯಬೇಕಾಗಿದೆ. ಪ್ರತೀವರ್ಷ ಮಳೆಗಾಲದಲ್ಲಿ ಪದೇಪದೇ ಇದು ಮರುಕಳಿಸುತ್ತಿರುವುದು, ಸರಕಾರ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಆರೋಗ್ಯ ಸಚಿವರು ತಮ್ಮ ಇಲಾಖೆಯನ್ನು ಚುರುಕುಗೊಳಿಸುವುದು ಅತ್ಯಗತ್ಯವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News