50 ಸಿಲಿಂಡರ್ ಗಳನ್ನಾದರೂ ನೀಡಿ ಎಂದು ಅಂಗಲಾಚಿದೆ, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ: ಡಾ.ಕಫೀಲ್ ಖಾನ್

Update: 2017-08-26 09:49 GMT

ಉತ್ತರ ಪ್ರದೇಶ, ಆ.26: ಆಕ್ಸಿಜನ್ ಸ್ಥಗಿತದಿಂದ 60ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ 9 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿತ್ತು.

ನಂತರ ಡಾ.ಕಫೀಲ್ ಖಾನ್, ಡಾ.ರಾಜೀವ್ ಮಿಶ್ರಾ, ಅವರ ಪತ್ನಿ ಡಾ. ಪೂರ್ಣಿಮಾ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆಕ್ಸಿಜನ್ ದುರಂತದ ಸಂದರ್ಭ ಬೇರೆ ಆಸ್ಪತ್ರೆಗಳಿಂದ ಹಾಗೂ ಹೊರಗಿನ ಸಂಸ್ಥೆಗಳಿಂದ ಸ್ವತಃ ಹಣ ಪಾವತಿಸಿ ಆಕ್ಸಿಜನ್ ತರಿಸಿ ಮಕ್ಕಳ ಪ್ರಾಣ ಉಳಿಸಲು ಪ್ರಯತ್ನಿಸಿದ್ದ ಡಾ. ಕಫೀಲ್ ಖಾನ್ ರ ವಿರುದ್ಧ ಕ್ರಮ ಕೈಗೊಂಡ ಉತ್ತರ ಪ್ರದೇಶ ಸರಕಾರದ ಕ್ರಮ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟರ ವರದಿ ಕೂಡ ಅವರನ್ನು ನಿರಪರಾಧಿ ಎಂದು ಹೇಳಿತ್ತು.

ಮಕ್ಕಳ ಪ್ರಾಣ ಉಳಿಸಲು ಪ್ರಯತ್ನಿಸಿದರೂ ಸ್ವತಃ ತನ್ನ ಮೇಲೆಯೇ ಆರೋಪಗಳನ್ನು ಹೊರಿಸಿರುವುದರಿಂದ ನೊಂದ ಕಫೀಲ್ ಖಾನ್ ಈ ಬಗ್ಗೆ ಫೇಸ್ಬುಕ್ ಲೈವ್ ನಲ್ಲಿ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 60 ಮಕ್ಕಳ ಸಾವಿನ ದುರಂತ ನಡೆದ ಆ ರಾತ್ರಿ ನಡೆದದ್ದು ಏನು ಎಂಬುದನ್ನು ವಿವರಿಸಿದ್ದಾರೆ.

“ಆಸ್ಪತ್ರೆಯಲ್ಲಿ 52 ಸಿಲಿಂಡರ್ ಗಳಿತ್ತು. 3  ಸಿಲಿಂಡರ್ ಗಳೊಂದಿಗೆ ಕಫೀಲ್ ಏನು ಮಾಡಬಹುದು ಎಂದು ಡಿಜಿಎಂಇ ಅವರು ಹೇಳುತ್ತಿರುವುದನ್ನು ನಾನು ನೋಡಿದೆ. ಸರ್, ನಾನು ಕೇವಲ 3 ಸಿಲಿಂಡರ್ ಗಳನ್ನು ತಂದಿಲ್ಲ. ಬದಲಾಗಿ, 24  ಗಂಟೆಗಳಲ್ಲಿ 250 ಸಿಲಿಂಡರ್ ಗಳನ್ನು ತಂದಿದ್ದೆ. ಸಂಜೆ 6 ಗಂಟೆಯವರೆಗೆ ಅಲ್ಲಿ ಒಬ್ಬ ವ್ಯಕ್ತಿಯೂ ಇರಲಿಲ್ಲ. ಹಗಲು ರಾತ್ರಿಯಿಡೀ ನಾವು ಓಡಾಡುತ್ತಲೇ ಇದ್ದೆವು. ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಡಿಎಂ ಅವರಿಗೆ ಈ ವಿಷಯ ಅದಾಗಲೇ ತಿಳಿದಿತ್ತು. ನಾನು ಮುಖ್ಯ ವೈದ್ಯಾಧಿಕಾರಿಗೆ ಕರೆ ಮಾಡಿದೆ. ಸರ್, ಕನಿಷ್ಠ ಪಕ್ಷ ನಮಗೆ 50 ಸಿಲಿಂಡರ್ ಗಳನ್ನಾದರೂ ನೀಡಿ ಎಂದು ನಾನು ಅಂಗಲಾಚಿದೆ. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ, ಹಾಗಿದ್ದೂ ನೀವು 3 ಸಿಲಿಂಡರ್ ಗಳ ಬಗ್ಗೆ ಮಾತನಾಡುತ್ತಿದ್ದೀರಾ..?” ಎಂದು ಕಫೀಲ್ ಖಾನ್ ವಿಡಿಯೋದಲ್ಲಿ ಹೇಳಿದ್ದಾರೆ.

ತನ್ನ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ ಎನ್ನುವ ಭಯದಿಂದ ತಾನು ಹಾಗೂ ಕುಟುಂಬ ಸದಸ್ಯರು ತಲೆಮರೆಸಿಕೊಂಡು ಬದುಕಬೇಕಾಗಿದೆ ಎಂದು ಕಫೀಲ್ ಖಾನ್ ಹೇಳಿದ್ದಾರೆ.

“ನಾವು ತಲೆಮರೆಸಿಕೊಂಡು ಬದುಕಬೇಕಾದ ಅನಿವಾರ್ಯತೆ ಇದೆ. ಅಮ್ಮ ಹಜ್ ಗೆ ತೆರಳಿದ್ದಾರೆ. ನಾಳೆ ಏನಾಗುತ್ತೋ ಎಂದು ಅವರು ಭಯದಲ್ಲಿದ್ದಾರೆ. ಅಲ್ಲಾಹ್ ಇದ್ದಾನೆ ಹಾಗು ಎಲ್ಲವೂ ಸರಿಯಾಗಲಿದೆ. ಮಕ್ಕಳ ಪ್ರಾಣವನ್ನು ಉಳಿಸಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಒಂದು ವೇಳೆ ನಾನು 10 ಮಕ್ಕಳ ಜೀವ ಉಳಿಸಿದ್ದರೂ ಆ ಮಕ್ಕಳ ಪೋಷಕರ ಆಶಿರ್ವಾದ ನನ್ನ ಮೇಲಿರಲಿದೆ” ಎಂದವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News