ಜಿಯೋಫೋನ್ ಬುಕ್ಕಿಂಗ್ ​ಮೂರೇ ದಿನದಲ್ಲಿ ದಿಢೀರ್ ಸ್ಥಗಿತ

Update: 2017-08-28 04:00 GMT

ಹೊಸದಿಲ್ಲಿ, ಆ.28: ಬಹುನಿರೀಕ್ಷಿತ 4ಜಿ ಸೌಲಭ್ಯದ ’ಉಚಿತ’ ಜಿಯೋಫೋನ್ ಕಾಯ್ದಿರಿಸುವಿಕೆಯನ್ನು ಕೇವಲ ಮೂರೇ ದಿನದಲ್ಲಿ ಕಂಪೆನಿ ದಿಢೀರ್ ಸ್ಥಗಿತಗೊಳಿಸಿದೆ. ನಿರೀಕ್ಷೆಗಿಂತ ಅಧಿಕ ಬುಕ್ಕಿಂಗ್ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಸೇವೆಗೆ ಇದು ಲಭ್ಯವಾಗುವ ನಿರೀಕ್ಷೆ ಇದೆ.

"ಲಕ್ಷಾಂತರ ಮಂದಿ ಜಿಯೋಫೋನ್ ಬುಕ್ಕಿಂಗ್ ಮಾಡಿದ್ದಾರೆ. ಮತ್ತೆ ಬುಕ್ಕಿಂಗ್ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ಮುಂದೆ ನೀಡಲಾಗುತ್ತದೆ" ಎಂದು ರಿಲಯನ್ಸ್ ಜಿಯೊ ವೆಬ್‌ಸೈಟ್ ಹೇಳಿದೆ. ಆದರೆ ಜಿಯೊ ಸ್ಟೋರ್ ಮತ್ತು ಚಿಲ್ಲರೆ ಮಳಿಗೆಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಂಡಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಕಂಪೆನಿ ಪ್ರತೀ ವಾರ 50 ಲಕ್ಷ ಜಿಯೊಫೋನ್ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಂಪೆನಿಯ ಸರ್ವಸದಸ್ಯರ ವಾರ್ಷಿಕ ಮಹಾಸಸಭೆಯಲ್ಲಿ ಘೋಷಿಸಿದ್ದರು.

ಆಗಸ್ಟ್ 24ರಂದು ಜಿಯೋಫೋನ್ ಬುಕ್ಕಿಂಗ್ ಆರಂಭವಾಗಿದ್ದು, 500 ರೂ. ಮುಂಗಡ ನೀಡಿ ಬುಕ್ ಮಾಡಬಹುದಿತ್ತು. ಉಳಿದ 1000 ರೂಪಾಯಿಯನ್ನು ಗ್ರಾಹಕರಿಗೆ ಸೆಟ್ ವಿತರಿಸುವ ವೇಳೆ ಪಾವತಿ ಮಾಡಬೇಕಾಗುತ್ತದೆ. ಎಲ್ಲ 1500 ರೂಪಾಯಿ ಕೂಡಾ 36 ತಿಂಗಳು ಬಳಕೆ ಮಾಡಿ ಫೋನ್ ಹಿಂದಿರುಗಿಸಿದರೆ ಮರುಪಾವತಿ ಮಾಡುವ ಮೊತ್ತವಾಗಿರುವುದರಿಂದ ಫೋನ್ ಸಂಪೂರ್ಣ ಉಚಿತ ಎಂದು ಕಂಪೆನಿ ಪ್ರಚಾರ ಮಾಡಿದೆ. ಸೆಪ್ಟೆಂಬರ್ 2ನೇ ವಾರ ಜೀಯೊಫೋನ್ ಗ್ರಾಹಕರ ಕೈಸೇರುವ ನಿರೀಕ್ಷೆ ಇದ್ದು, ಮಾಸಿಕ 153 ರೂಪಾಯಿ ಪಾವತಿಸಿ, ಅನಿಯಮಿತ ನೆಟ್ ಸಂಪರ್ಕ ಮತ್ತು ಕರೆ ಸೇವೆ ಪಡೆಯುವ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News