ಡೋಕ್ಲಾಮ್ ನಿಂದ ಸೇನಾ ಹಿಂತೆಗೆತಕ್ಕೆ ಭಾರತ, ಚೀನಾ ಒಪ್ಪಿಗೆ

Update: 2017-08-28 14:32 GMT

ಹೊಸದಿಲ್ಲಿ, ಆ. 28: ಡೋಕಾ ಲಾ ಬಿಕ್ಕಟ್ಟು ಕೊನೆಗೂ ಪರಿಹಾರವಾಗುವ ಲಕ್ಷಣ ಕಾಣಿಸಿದೆ. ಡೋಕಾ ಲಾದ ಮುಖಾಮುಖಿ ಪ್ರದೇಶದಿಂದ ಚೀನಾ ಹಾಗೂ ಭಾರತ ತನ್ನ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆ ಎಂದು ಭಾರತ ತಿಳಿಸಿದೆ.

  ಇತ್ತೀಚಿನ ವಾರಗಳಲ್ಲಿ ಭಾರತ ಹಾಗೂ ಚೀನಾ ಡೋಕಾ ಲಾ ಘಟನೆಗಳಿಗೆ ಸಂಬಂಧಿಸಿ ರಾಜತಾಂತ್ರಿಕ ಸಂವಹನ ನಡೆಸಿತ್ತು. ನಾವು ನಮ್ಮ ನಿಲುವು, ಆತಂಕ ಹಾಗೂ ಹಿತಾಸಕ್ತಿಯನ್ನು ಅಭಿವ್ಯಕ್ತಿಸಿದ್ದೆವು. ಈ ಹಿನ್ನೆಲೆಯಲ್ಲಿ ಡೋಕಾ ಲಾದ ಮುಖಾಮುಖಿ ಪ್ರದೇಶದಿಂದ ಯೋಧರನ್ನು ತತ್‌ಕ್ಷಣ ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡೆವು. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೆಲವೇ ಗಂಟೆಗಳಲ್ಲಿ ಚೀನ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗಡಿಯ ಭಾರತೀಯ ಭಾಗದಲ್ಲಿ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ಹೇಳಿದೆ. ಡೋಕಾ ಲಾ ಪ್ರದೇಶದಲ್ಲಿ ಚೀನಾ ಪಡೆ ತನ್ನ ಗಸ್ತನ್ನು ಮುಂದುವರಿಸಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹು ಚುನ್‌ಯಿಂಗ್ ತಿಳಿಸಿದ್ದಾರೆ.

ಬಿಕ್ಕಟ್ಟಿಗೆ ಕಾರಣವಾದ ಚೀನಾ ಸೇನಾ ಪಡೆ ನಿರ್ಮಿಸುತ್ತಿದ್ದ ರಸ್ತೆಯ ಪರಿಸ್ಥಿತಿ ಬಗ್ಗೆ ಎರಡೂ ದೇಶಗಳು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ನೆರೆಯ ಎರಡು ದೇಶಗಳ ನಡುವಿನ ಗಂಭೀರ ಬಿಕ್ಕಟ್ಟು ಈ ನಿರ್ಧಾರದಿಂದ ಶಮನವಾಗಿದೆ. ಬ್ರೆಝಿಲ್, ರಶ್ಯಾ ಹಾಗೂ ದಕ್ಷಿಣ ಆಫ್ರಿಕಾ ಒಳಗೊಂಡಿರುವ ಬ್ರಿಕ್ಸ್ ಶೃಂಗ ಸಭೆ ಮುಂದಿನ ತಿಂಗಳ ಆರಂಭದಲ್ಲಿ ನಡೆಯಲಿದೆ. ಈ ಶೃಂಗ ಸಭೆ ನಡೆಯಲು ಕೆಲವೇ ದಿನಗಳಿರುವಂತೆಯೇ ಎರಡೂ ದೇಶಗಳು ಈ ನಿರ್ಧಾರ ಕೈಗೊಂಡಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಬಿಕ್ಕಟ್ಟು ಮುಂದುವರಿದಿದ್ದರೆ ನರೇಂದ್ರ ಮೋದಿಯವರು ಬ್ರಿಕ್ಸ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯವಾಗುತ್ತಿರಲಿಲ್ಲ.

ಎರಡೂ ಕಡೆಗಳಲ್ಲಿ ಸೇನೆ ಹಿಂದೆಗೆಯಲಾಗಿದೆ ಎಂದು ಭಾರತ ಘೋಷಿಸಿದ 2 ಗಂಟೆಗಳಲ್ಲಿ ಬೀಜಿಂಗ್ ಹೇಳಿಕೆ. -ತನ್ನ ಸೇನೆ ಗಡಿಯಲ್ಲಿ ಗಸ್ತನ್ನು ಮುಂದುವರಿಸಲಿದೆ ಎಂದ ಚೀನಾ ವಿದೇಶಾಂಗ ಸಚಿವಾಲಯ.

-ಗಡಿ ಬಿಕ್ಕಟ್ಟು ಪ್ರದೇಶವಾದ ಡೋಕಾ ಲಾದಿಂದ ಭಾರತ ತನ್ನ ಸೇನೆಯನ್ನು ಹಿಂದೆ ಕರೆಸಿರುವುದಕ್ಕೆ ಸಂತಸ ಇದೆ ಎಂದ ಚೀನ.

ಭಾರತ ಸೇನೆ ಹಿಂದೆಗೆದಿದೆ ಎಂದ ಚೀನ

 ಡೋಕಾ ಲಾ ಪ್ರದೇಶದಿಂದ ಎರಡೂ ದೇಶಗಳು ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ ಎಂದು ಭಾರತ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ಡೋಕಾ ಲಾದ ಗಡಿ ಪ್ರದೇಶದಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ಚೀನಾ ಪ್ರತಿಪಾದಿಸಿದೆ.

 ಇದರ ಹೊರತಾಗಿಯೂ ತನ್ನ ಸೇನಾ ಪಡೆ ಗಡಿ ಪ್ರದೇಶದಲ್ಲಿ ಗಸ್ತನ್ನು ಮುಂದುವರಿಸಲಿದೆ ಎಂದಿದೆ. ಹಾಗೂ ಗಡಿ ಬಿಕ್ಕಿಟ್ಟಿನ ಪ್ರದೇಶವಾದ ಡೋಕಾ ಲಾದಲ್ಲಿ ಭಾರತ ತನ್ನ ಸೇನೆಯನ್ನು ಹಿಂದೆ ಕರೆದಿರುವುದು ತನಗೆ ಸಂತಸ ತಂದಿದೆ ಎಂದು ಹೇಳಿದೆ. ಆದರೆ, ಡೋಕಾ ಲಾ ಪ್ರದೇಶದಲ್ಲಿ ನಿರಂತರ ಬಿಕ್ಕಟ್ಟಿಗೆ ಕಾರಣವಾಗಿರುವ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಚೀನಾ ಮೌನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News