ಗುಪ್ತಚರ ಸಂಸ್ಥೆಯಲ್ಲಿ 1,430 ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2017-08-28 08:59 GMT

ಮಂಗಳೂರು, ಆ.28: ಭಾರತ ಸರಕಾರದ ಗುಪ್ತಚರ ಸಂಸ್ಥೆ(Intelligence Bureau)ಯಲ್ಲಿ ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ(Grade-II/Excutive) ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 1,430 ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಪೈಕಿ ಸಾಮಾನ್ಯ 951, ಇತರ ಹಿಂದುಳಿದ ವರ್ಗ(ಒಬಿಸಿ)-184, ಪರಿಶಿಷ್ಟ ಜಾತಿ- 109, ಪರಿಶಿಷ್ಟ ವರ್ಗ- 56 ಸಹಿತ ಒಟ್ಟು 1300 ಹುದ್ದೆಗಳು ಹಾಗೂ ಮಾಜಿ ಸೈನಿಕರ ಪೈಕಿ ಸಾಮಾನ್ಯ- 95, ಒಟ್ಟು 130 ಇತರ ಹಿಂದುಳಿದ ವರ್ಗ(ಒಬಿಸಿ)-19, ಪರಿಶಿಷ್ಟ ಜಾತಿ- 11, ಪರಿಶಿಷ್ಟ ವರ್ಗ- 5 ಹುದ್ದೆಗಳು ಸೇರಿದಂತೆ ಒಟ್ಟು 130 ಹುದ್ದೆಗಳನು ಮೀಸಲಿವೆ.

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಪದವಿ ಅಥವಾ ಅದಕ್ಕೆ ಸಮಾನವಾದ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಕೋರ್ಸನ್ನು ಮಾಡಿರಬೇಕು. 18ರಿಂದ 27 ವರ್ಷ ವಯೋಮಿತಿ ಹೊಂದಿರಬೇಕು. ಈ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ 5 ವರ್ಷ ಹಾಗೂ ಒಬಿಸಿಗಳಿಗೆ 3 ವರ್ಷ ಗರಿಷ್ಠ ವಯೋಮಿತಿ ಸಡಿಲಿಕೆ ಇದೆ. 3 ವರ್ಷ ನಿರಂತರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಲಾಖಾವಾರು ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ 40 ವರ್ಷದ ವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಇದಲ್ಲದೆ ವಿಧವೆಯರಿಗೆ, ವಿವಾಹ ವಿಚ್ಛೇದಿತ ಮಹಿಳೆಗೆ ಹಾಗೂ ಕಾನೂನಾತ್ಮಕವಾಗಿ ಪತಿಯಿಂದ ಬೇರ್ಪಟ್ಟು ಮರುವಿವಾಹವಾಗದೆ ಇರುವ ಮಹಿಳಾ ಅಭ್ಯರ್ಥಿಗಳ ಪೈಕಿ ಸಾಮಾನ್ಯ ವರ್ಗದವರಿಗೆ 35 ವರ್ಷ ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ 40 ವರ್ಷಗಳ ವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. 1-1-1980ರಿಂದ 31-12-1989ರವರೆಗೆ ಜಮ್ಮು-ಕಾಶ್ಮೀರದಲ್ಲಿ ನೆಲೆಸಿದ್ದ ಮಾಜಿ ಸೈನಿಕರಿಗೆ ಹಾಗೂ 2002ರ ಗುಜರಾತ್ ಗಲಭೆಯಲ್ಲಿ ಸಾವನ್ನಪ್ಪಿರುವವರ ಮಕ್ಕಳಿಗೆ ಹಾಗೂ ಅವಲಂಬಿತ ಅಭ್ಯರ್ಥಿಗಳಿಗೂ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಆದರೆ ಈ ಹುದ್ದೆಗೆ ಅಂಗಲವಿಕಲರು, ವಿಕಲಚೇತನರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸೆಪ್ಟಂಬರ್ 2ರೊಳಗೆ www.mha.nic.in ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸಾಮಾನ್ಯ ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳು ಮಾತ್ರ 100 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಆದರೆ ಎಲ್ಲಾ ಪರಿಶಿಷ್ಟ ಜಾತಿ-ಪಂಗಡಗಳ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. ಆಯ್ಕೆ ಪರೀಕ್ಷೆಯು ಬೆಂಗಳೂರು ಸೇರಿದಂತೆ ದೇಶಾದ್ಯಂತ 33 ಕೇಂದ್ರಗಳಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ http://mha.nic.in/vacancies ಅನ್ನು ಪರಿಶೀಲಿಸಬಹುದು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News