ಅಧಿಕಾರದಲ್ಲಿದ್ದಾಗ ಏಕೆ ಯಡಿಯೂರಪ್ಪಗೆ ದಲಿತರ ನೆನಪಾಗಲಿಲ್ಲ: ಸಿದ್ದರಾಮಯ್ಯ ಪ್ರಶ್ನೆ

Update: 2017-08-29 08:19 GMT

ಮೈಸೂರು, ಆ.29: ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಅವರು ದಲಿತರ ಮನೆಗಳಿಗೆ ಹೋಗಲಿಲ್ಲ, ಅವರನ್ನು ಮನೆಗೆ ಕರೆದು ಊಟ ಹಾಕಿಸಲಿಲ್ಲ. ಕಷ್ಟ-ಸುಖ ಕೇಳಲಿಲ್ಲ. ಈಗ ರಾಜಕೀಯಕ್ಕಾಗಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ದಲಿತರ ಬಗ್ಗೆ ಒಂದು ದಿನವೂ ಆಲೋಚಿಸಲಿಲ್ಲ. ಅವರಿಗಾಗಿ ಕಾರ್ಯಕ್ರಮ ರೂಪಿಸಲಿಲ್ಲ. ದಲಿತರನ್ನು ಮಂತ್ರಿ ಮಾಡಿ ಒಳ್ಳೇ ಖಾತೆ ಕೊಡಲಿಲ್ಲ. ಈಗ ದಲಿತರನ್ನು ಮನೆಗೆ ಕರೆದು ಊಟ ಹಾಕಿಸುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ದಲಿತರನ್ನು ಮನೆಗೆ ಕರೆದು ಊಟ ಹಾಕಿಸಿ ಎಂದು ವಮಗೆ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಆದರೆ ನಾವು ನಿತ್ಯ ಅವರೊಂದಿಗೇ ಇರುತ್ತೇವೆ, ಊಟ ಮಾಡುತ್ತಲೇ ಇರುತ್ತೇವೆ. ಯಡಿಯೂರಪ್ಪ ಅವರ ಮನೆಗೆ ಹೋದವರು  ಮಾತ್ರ ದಲಿತರೇ ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. 

ನವ ಕರ್ನಾಟಕ ನಿರ್ಮಾಣಕ್ಕೆ ಪರಿವರ್ತನಾ ರ್ಯಾಲಿ ಮಾಡುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಏಕೆ ನವ ಕರ್ನಾಟಕ ನಿರ್ಮಾಣ ಮಾಡಲಿಲ್ಲ ಎಂದರು. ಇಂತಹ  ಮೂಲಕ ಜನರನ್ನು ದಾರಿ ತಪ್ಪಿಸಲು ಆಗದು ಎಂದರು. 

ಜಾತಿ, ಧರ್ಮದ ಹೆಸರಲ್ಲಿ ನಡೆಸುವ ಹಿಂಸಾಚಾರ ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಜನರ ಕಣ್ಣೊರೆಸುವ ತಂತ್ರ. ಕೋಮುವಾದವೇ ಬಿಜೆಪಿಯ ರಹಸ್ಯ ಅಜೆಂಡಾ. ಆ ಮೂಲಕವೇ ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತದೆ. ಈ ಪ್ರಯೋಗ ಕರ್ನಾಟಕದಲ್ಲಿ ನಡೆಯದು. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ನುಡಿದರು. 

ನಮ್ಮದು ಬಸವಣ್ಣನವರ, ಕನಕದಾಸರ, ಕುವೆಂಪು ಅವರ ನಾಡು. ಇಲ್ಲಿಯ ಜನ ಜಾತ್ಯಾತೀತ ಮನೋಭಾವದವರು. ಹೀಗಾಗಿ ಕೋಮುವಾದ ಮುಂದಿಟ್ಟುಕೊಂಡು ಮತಗಳನ್ನು ಸೆಳೆಯಲು ಹೋದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಗೆ ಸಿದ್ಧಾಂತ ಎಂಬುದೇ ಇಲ್ಲ. ಕೇವಲ ಕೋಮುವಾದದ ಮೇಲೆ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಾರೆ. 1950ರಲ್ಲಿ ಜನಸಂಘದ ಉದಯವಾಯಿತು. ಆದರೂ ಮೊನ್ನೆವರೆಗೆ ಅಧಿಕಾರಕ್ಕೆ ಬರಲಾಗಲಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮ ತಪ್ಪುಗಳಿಂದಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ತಪ್ಪುಗಳಿಂದ ಪಾಠ ಕಲಿಯಬೇಕು. ಹೀಗಾಗಿ 2019ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News