70 ವರ್ಷದ ವೃದ್ಧನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಗೋರಕ್ಷಕ ದುಷ್ಕರ್ಮಿಗಳು

Update: 2017-08-29 11:23 GMT

ರಜೌರಿ, ಆ.29: ದನವೊಂದನ್ನು ಕರೆದೊಯ್ಯುತ್ತಿದ್ದ ಯುವಕನ ಹಿಂದೆ ನಡೆದು ಹೋದರು ಎಂಬ ಕ್ಷುಲ್ಲಕ ಕಾರಣಕ್ಕೆ 70 ವರ್ಷದ ವೃದ್ಧರೋರ್ವರಿಗೆ ಗೋರಕ್ಷಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದಿದೆ.

70 ವರ್ಷದ ಲಾಲ್ ಹುಸೇನ್ ಅವರ ತಲೆ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಅವರನ್ನು ರಸ್ತೆಬದಿಯ ತೋಡೊಂದರಲ್ಲಿ ಎಸೆದು ಸಾಯಿಸಲು ದುಷ್ಕರ್ಮಿಗಳು ಯತ್ನಿಸಿದ್ದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಕೆಲ ಮಂದಿ ನೋಡಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲೆಮಾರಿ ಗುಜ್ಜರ್ ಸಮುದಾಯಕ್ಕೆ ಸೇರಿದ ಹುಸೇನ್ ತನ್ನ ಬಳಿ ದನಗಳಿಲ್ಲ. ಕೇವಲ ಎರಡು ಎಮ್ಮೆಗಳಿವೆ ಹಾಗೂ ಕೆಲ ಆಡು ಹಾಗೂ ಕುರಿಗಳಿವೆ. ಇವುಗಳನ್ನು ಹದಿನೈದು ದಿನಗಳ ಹಿಂದೆ ತಾನು .5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾಗಿಯೂ ಅವರು ಹೇಳುತ್ತಾರೆ. ಶನಿವಾರ ಅವರು ರಜೌರಿ ಜಿಲ್ಲೆಯ ಬಕೋರಿ ಎಂಬಲ್ಲಿನ ಜಮ್ಮು ಆ್ಯಂಡ್ ಕಾಶ್ಮೀರ ಬ್ಯಾಂಕಿನ ಶಾಖೆಯಲ್ಲಿ ಈ ಹಣ ಠೇವಣಿಯಿರಿಸಲು ಹೋದಾಗ ಅವರ ಮೇಲೆ ದಾಳಿ ನಡೆದಿತ್ತು.

ನಗದು, ಮೊಬೈಲ್ ಫೋನಿದ್ದ ಚೀಲವನ್ನು ಸೆಳೆದ ದುಷ್ಕರ್ಮಿಗಳು ಹಲ್ಲೆ ನಡೆಸಿ ತನ್ನನ್ನು ರಸ್ತೆ ಬದಿ ಎಸೆದಿದ್ದರು ಎಂದು ರಜೌರಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಅವರು ಹೇಳುತ್ತಾರೆ. ದನವೊಂದನ್ನು ಸಾಗಿಸುತ್ತಿದ್ದ ಯುವಕನ ಹಿಂದೆ ನಡೆಯುತ್ತಿದ್ದುದೇ ಅವರು ಮಾಡಿದ ತಪ್ಪಾಗಿತ್ತು ಎಂದು ಹುಸೇನ್ ಅವರ ಪುತ್ರ ಮುಹಮ್ಮದ್ ಫಾರೂಖ್ ಹೇಳುತ್ತಾರೆ.

ಗುಂಧಾ ಗ್ರಾಮದ ತನ್ನ ನಿವಾಸದಿಂದ ಶನಿವಾರ ಹುಸೇನ್ ಹೊರಟಿದ್ದಾಗ ದಾಳಿ ನಡೆದಿತ್ತು. ದಾಳಿ ಸಂಬಂಧ ಗುಂಧ ಗ್ರಾಮದ ಕುಲದೀಪ್ ರಾಜ್ ಎಂಬಾತನನ್ನು ಬಂಧಿಸಲಾಗಿದೆ. ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಶಂಕಿತ ಗೋರಕ್ಷಕರಿಂದ ದಾಳಿಗೊಳಗಾದ ಎರಡನೇ ಗುಜ್ಜರ್ ಸಮುದಾಯದ ವ್ಯಕ್ತಿ ಹುಸೇನ್ ಆಗಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಮಹಿಳೆಯರೂ ಮಕ್ಕಳೂ ಸೇರಿದಂತೆ ಗುಜ್ಜರ್ ಕುಟುಂಬವೊಂದರ ಮೇಲೆ ರಿಯಾಸ ಜಿಲ್ಲೆಯ ಪೌನಿ ಎಂಬಲ್ಲಿ ಗೋರಕ್ಷಕರಿಂದ ದಾಳಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News