ಲಕ್ಷ್ಮೀ ಹೆಬ್ಬಾಳ್ಕರ್ ‘ಮಹಾರಾಷ್ಟ್ರಕ್ಕೆ ಜೈಕಾರ ’ಹೇಳಿಕೆಗೆ ಕಾಂಗ್ರೆಸ್ ನಾಯಕರ ಅಸಮಾಧಾನ

Update: 2017-08-31 07:00 GMT

ಬೆಂಗಳೂರು, ಆ.31: ‘‘ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ನಾನೇ ಜೈಕಾರ ಹಾಕುತ್ತೇನೆ’’ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘‘ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಹೆಬ್ಬಾಳ್ಕರ್ ಕನ್ನಡದ ನೆಲದ ವಿಷಯದ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದಿತ್ತು. ಅವರಿಗೆ ಕನಿಷ್ಠ ಜ್ಞಾನದ ಅಗತ್ಯವಿತ್ತು’’ ಎಂದು ರಾಜ್ಯ ಉಸ್ತುವಾರಿ ಕೆ.ಎಲ್. ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.

27ರಂದು ಮರಾಠಿಗರ ಪ್ರಾಬಲ್ಯದ ಬಸರೀಕಟ್ಟೆ ಗ್ರಾಮದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಬ್ಬಾಳ್ಕರ್, ಬೆಳಗಾವಿ ಗಡಿವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಒಂದು ವೇಳೆ ತೀರ್ಪು ಮಹಾರಾಷ್ಟ್ರದ ಪರ ಬಂದರೆ ನಾನು ಎಲ್ಲರಿಗಿಂತ ಮೊದಲೇ ಜೈಕಾರ ಹಾಕುವೆ. ಇಂತಹ ಧೈರ್ಯ ಬೇರೆ ಯಾವ ನಾಯಕರಿಗೂ ಇಲ್ಲ’’ ಎಂಬ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

''ಹೆಬ್ಬಾಳ್ಕರ್ ಹೇಳಿಕೆ ತಪ್ಪು. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ'' ಎಂದು ಜಾರಕಿಹೊಳಿ ಸಹೋದರರಾದ ರಮೇಶ್ ಹಾಗೂ ಸತೀಶ್ ಹೇಳಿದ್ದಾರೆ.

“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಹೆಬ್ಬಾಳ್ಕರ್ ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ’’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News