6 ಸಿಕ್ಸರ್ ಸಿಡಿಸಿದ ವಿಂಡೀಸ್‌ನ ‘ದೈತ್ಯ’ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮೊಟಕುಗೊಳಿಸಲು ಕಾರಣವೇನು ಗೊತ್ತೇ?

Update: 2017-09-02 09:54 GMT

ಜಮೈಕಾ, ಸೆ.2: ವಿಶ್ವ ಕ್ರಿಕೆಟ್‌ನ ಅತ್ಯಂತ ತೂಕದ ಬ್ಯಾಟ್ಸ್‌ಮನ್ ಎಂದೇ ಪ್ರಸಿದ್ಧಿಯಾಗಿರುವ ರಾಹ್ಕೀಮ್ ಕಾರ್ನ್‌ವೆಲ್ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೊಸ್ ಟ್ರಿಡೆಂಟ್ಸ್ ಹಾಗೂ ಸೈಂಟ್ ಲೂಸಿಯಾ ಸ್ಟಾರ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಆದರೆ ಅವರು ಇನಿಂಗ್ಸ್ ನಡುವೆಯೇ ಬ್ಯಾಟಿಂಗ್ ಮೊಟಕುಗೊಳಿಸಿ ಪೆವಿಲಿಯನ್‌ನತ್ತ ತೆರಳಿದರು.

ರನ್‌ಗಾಗಿ ವಿಕೆಟ್ ನಡುವೆ ಓಡಲು ಸಾಧ್ಯವಾಗದೇ ಇರುವುದು ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವಾಗಿತ್ತು.

 ಆರಡಿ ಐದಂಚು ಎತ್ತರದ ಕಾರ್ನ್‌ವೆಲ್ 143 ಕೆಜಿ ತೂಕವಿದ್ದಾರೆ. ಸ್ಟಾರ್ಸ್‌ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ಅವರು 44 ಎಸೆತಗಳನ್ನು ಎದುರಿಸಿದ್ದು, ಆರು ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಬಾರಿಸಿ ಚೊಚ್ಚಲ ಅರ್ಧಶತಕ(78*) ಸಿಡಿಸಿದರು. ದುರದೃಷ್ಟವಶಾತ್ ಕಾರ್ನ್‌ವೆಲ್ ಪೂರ್ತಿ ಓವರ್ ಆಡದೇ 18ನೆ ಓವರ್‌ನಲ್ಲಿ ಗಾಯಗೊಂಡು ನಿವೃತ್ತಿಯಾದರು. ಇದು ಸ್ಟಾರ್ಸ್‌ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಕಾರ್ನ್‌ವೆಲ್ ಮೈದಾನದಿಂದ ನಿರ್ಗಮಿಸುತ್ತಿರುವ ನಿರ್ಧಾರದಿಂದ ನಾಯಕ ಕೀರನ್ ಪೊಲಾರ್ಡ್ ಅಸಮಾಧಾನ ವ್ಯಕ್ತಪಡಿಸಿದರು. ಈ ಪಂದ್ಯವನ್ನು ಸ್ಟಾರ್ಸ್‌ ತಂಡ 29 ರನ್‌ಗಳಿಂದ ಸೋತಿತ್ತು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಬಾರ್ಬಡೊಸ್ ತಂಡ ಡ್ವೆಯ್ನೆ ಬ್ರಾವೊ ಶತಕದ ನೆರವಿನಿಂದ 4 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತ್ತು. ಬೌಲಿಂಗ್‌ನಲ್ಲೂ ಕಾಣಿಕೆ ನೀಡಿದ್ದ ಕಾರ್ನ್‌ವೆಲ್ 2 ವಿಕೆಟ್‌ಗಳನ್ನು ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News