ಜಾಗತೀಕರಣ ದಲಿತರ ಮೇಲೆ ಬೀರಿದ ಪರಿಣಾಮ

Update: 2017-09-04 18:42 GMT

ಜಾಗತೀಕರಣ ಮತ್ತು ಉದಾರೀಕರಣ ತೆರೆದುಕೊಂಡ ಸಂದರ್ಭದಲ್ಲಿ, ಇದರಿಂದ ದಲಿತರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಕೆಲವು ದಲಿತ ನಾಯಕರುಗಳೇ ವಾದಿಸಿದ್ದರು. ಜಾಗತೀಕರಣದಿಂದ ಸಂಭವಿಸುವ ದುರಂತಗಳಿಗೂ ದಲಿತ ಸಮುದಾಯಕ್ಕೂ ಸಂಬಂಧವಿಲ್ಲ ಎಂಬ ಅರ್ಥದಲ್ಲಿ ಅವರು ಮಾತನಾಡುತ್ತಿದ್ದರು. ಈ ನಿಟ್ಟಿನಲ್ಲಿ ಜಾಗತೀಕರಣ ಹೇಗೆ ದಲಿತರ ಬದುಕಿನ ಮೇಲೆ ತನ್ನ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಡಾ. ಆನಂದ್ ತೇಲ್ತುಂಬ್ಡೆ ಅವರು ‘ಜಾಗತೀಕರಣ ಮತ್ತು ದಲಿತರು’ ಕೃತಿಯಲ್ಲಿ ಚರ್ಚಿಸಿದ್ದಾರೆ.

ನವ ಉದಾರವಾದ ನೀತಿಯೂ ಸಹ ತನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ಬದಿಗಿಟ್ಟು, ನೊಂದ ಜನಸಮುದಾಯಗಳ ಮನಗೆಲ್ಲಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ. ನವ ಉದಾರವಾದದ ಕರಾಳ ಬಾಹುಗಳನ್ನು ಪ್ರತಿರೋಧಿಸುವ ಜನಪರ ಚಳವಳಿಗಳನ್ನು ದೇಶದ ಭದ್ರತೆಗೆ ಮಾರಕ ಎಂದು ಬಿಂಬಿಸುವುದು ಈ ತಂತ್ರಗಳಲ್ಲಿ ಒಂದಾಗಿದೆ. ವಿಪರ್ಯಾಸವೆಂದರೆ ದೇಶದ ದಲಿತ ಸಮುದಾಯಗಳು, ಸಾಮುದಾಯಿಕ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ಸಂಘಟನೆಗಳು ಆಳ್ವಿಕರ ಈ ತಂತ್ರಕ್ಕೆ ಸುಲಭವಾಗಿ ತುತ್ತಾಗುತ್ತಿವೆ ಎಂದು ಕೃತಿಯ ಮುನ್ನುಡಿಯಲ್ಲಿ ನಾ. ದಿವಾಕರ್ ಅಭಿಪ್ರಾಯಪ ಡುತ್ತಾರೆ. ತತ್ಪರಿಣಾಮವಾಗಿ ಜಾಗತೀಕರಣದಿಂದ ದಲಿತರಿಗೆ ಅನುಕೂಲಗಳೇ ಹೆಚ್ಚು ಎಂಬ ವಾದಕ್ಕೆ ಹೆಚ್ಚು ಪುಷ್ಟಿ ದೊರೆಯುತ್ತಿದೆ. ಈ ಗೊಡ್ಡು ವಾದವನ್ನು ನಿರಾಕರಿಸುವುದಷ್ಟೇ ಅಲ್ಲದೆ, ಅಂಕಿ ಅಂಶಗಳ ಸಮೇತ ತಿರಸ್ಕರಿಸಲು ಪ್ರಸ್ತುತ ಕೃತಿ ನೆರವಾಗುತ್ತದೆ. ಈ ಹಿನ್ನೆಲೆ ಯಲ್ಲಿ ಪ್ರಸ್ತುತ ಕೃತಿ ಜಾಗತೀಕರಣದ ಪರಿಣಾಮ ಮತ್ತು ದಲಿತ ಸಮುದಾಯಗಳ ಸ್ಥಿತ್ಯಂತರಗಳ ಬಗ್ಗೆ ಆಮೂಲಾಗ್ರ ಚಿತ್ರಣ ನೀಡುತ್ತದೆ.

ಕೃತಿಯಲ್ಲಿ ಜಾಗತೀಕರಣವನ್ನು ಶಿಸ್ತು ಬದ್ದವಾಗಿ ಅಧ್ಯಯನ ಮಾಡಲಾಗಿದೆ. ಆರಂಭದಲ್ಲಿ ಜಾಗತೀಕರಣದ ಚಾರಿತ್ರಿಕ ದೃಷ್ಟಿಕೋನವನ್ನು ಲೇಖಕರು ತೆರೆದಿಟ್ಟಿದ್ದಾರೆ. ಜಾಗತಿಕ ವ್ಯವಸ್ಥೆಗೆ ಭಾರತದ ಪ್ರವೇಶವಾದ ಸಂದರ್ಭ ಮತ್ತು ಭಾರತದಲ್ಲಿ ದಲಿತರ ವಾಸ್ತವ ಸ್ಥಿತಿಯನ್ನು ಈ ಅಧ್ಯಾಯದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಎರಡನೆ ಅಧ್ಯಾಯದಲ್ಲಿ ಬಡಜನತೆಯ ಮೇಲೆ ಸುಧಾರಣೆ ಮಾಡಿರುವ ಪ್ರಭಾವ ಯಾವ ರೀತಿಯದ್ದು ಎನ್ನುವುದು ಬಿಡಿ ಬಿಡಿಯಾಗಿ ನೋಡಲಾಗಿದೆ. ಹಾಗೆಯೇ ಅವಕಾಶ ವಂಚಿತ ಸಾಮಾಜಿಕ ಸಮುದಾಯಗಳಾಗಿ ದಲಿತರ ಮೇಲೆ ಸುಧಾರಣೆಯ ಪ್ರಭಾವವನ್ನು, ಶಿಕ್ಷಣ, ಉದ್ಯೋಗ, ದೌರ್ಜನ್ಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ವಿವರಿಸಲಾಗಿದೆ.

ಲಡಾಯಿ ಪ್ರಕಾಶ ಹೊರತಂದಿರುವ ಕೃತಿಯನ್ನು ನಾ. ದಿವಾಕರ ಅವರು ಸರಳ ಕನ್ನಡಕ್ಕಿಳಿಸಿದ್ದಾರೆ. ಕೃತಿಯ ಮುಖಬೆಲೆ 60 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News