ಚೆಸ್ ವಿಶ್ವಕಪ್: ವಿಶ್ವನಾಥನ್ ಆನಂದ್ ಔಟ್

Update: 2017-09-08 18:46 GMT

ಜಾರ್ಜಿಯ, ಸೆ.8: ಐದು ಬಾರಿಯ ಚಾಂಪಿಯನ್ ವಿಶ್ವನಾಥನ್ ಆನಂದ್ ಚೆಸ್ ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಡ್ರಾಗೆ ತ್ಯಪ್ತಿಪಟ್ಟ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಟೂರ್ನಿಯ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆನಂದ್ ಕೆನಡಾದ ಆ್ಯಂಟನ್ ಕೊವಾಲಿಯೊವ್ ವಿರುದ್ಧ ಡ್ರಾ ಸಾಧಿಸಿದರು. 15 ವರ್ಷಗಳ ಬಳಿಕ ನಾಕೌಟ್ ಸ್ಪರ್ಧೆಯಲ್ಲಿ ಆಡಿರುವ ಆನಂದ್ ಅವರು ಆ್ಯಂಟನ್ ವಿರುದ್ಧದ ಮೊದಲ ಗೇಮ್‌ನ್ನು ಸೋತಿದ್ದರು. ಎರಡನೆ ಗೇಮ್‌ನ್ನು ಜಯಿಸುವ ಮೂಲಕ ಸ್ಕೋರನ್ನು ಸಮಬಲಗೊಳಿಸಿದರು. 31 ನಡೆಗಳ ಬಳಿಕ ಪಂದ್ಯ ಗೆಲ್ಲುವ ವಿಶ್ವಾಸ ಕಳೆದುಕೊಂಡ ಆನಂದ್ ಪಂದ್ಯ ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು. ಆನಂದ್ ಮುಂದಿನ ವರ್ಷ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ವೈಲ್ಡ್ ಕಾರ್ಡ್ ಪಡೆದಿದ್ದರೂ 2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ.

 ಇದೇ ವೇಳೆ ಉತ್ತಮ ಪ್ರದರ್ಶನ ಮುಂದುವರಿಸಿದ ಗ್ರಾಂಡ್ ಮಾಸ್ಟರ್ ವಿದಿತ್ ಗುಜರಾತಿ ವಿಯೆಟ್ನಾಂನ ಲೀ ಕ್ವಾಂಗ್ ಲಿಮ್‌ರನ್ನು 1.5-0.5 ಅಂಕಗಳಿಂದ ಮಣಿಸಿ ದ್ವಿತೀಯ ಸುತ್ತಿಗೆ ತಲುಪಿದರು. ಭಾರತದ ಸೇತುರಾಮನ್ ಹಾಗೂ ಹರಿಕೃಷ್ಣ ನಡುವೆ ಪೈಪೋಟಿಯಿಂದ ಕೂಡಿದ್ದ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. 1.6 ಮಿಲಿಯನ್ ಡಾಲರ್ ಬಹುಮಾನ ಮೊತ್ತದ ಚೆಸ್ ವಿಶ್ವಕಪ್‌ನ ಮೊದಲ ಸುತ್ತಿನ ನಾಕೌಟ್ ಪಂದ್ಯದಲ್ಲಿ 128 ಆಟಗಾರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News