ಒಡೆದ ಕನ್ನಡಿಯ ಫಲಿಸುವ ಚೂರುಗಳು...

Update: 2017-09-08 18:59 GMT

‘ಒಡೆದ ಕನ್ನಡಿ’ ಜಗತ್ಪ್ರಸಿದ್ಧ ವ್ಯಕ್ತಿಗಳ ನುಡಿ ಚಿತ್ರಗಳನ್ನು ಒಳಗೊಂಡಿವೆ. ತೆಲುಗು ಲೇಖಕ ಮುಕ್ತವರಂ ಪಾರ್ಥಸಾರಥಿ ಅವರು ಇವುಗಳನ್ನು ಜೊತೆ ಸೇರಿಸಿ, ಬಿ. ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಇಳಿಸಿದ್ದಾರೆ. ಸುಮಾರು 34 ಸುಪ್ರಸಿದ್ಧ ವಿದೇಶಿ ಲೇಖಕರ ವಿವಾದಾತ್ಮಕ ಬದುಕಿನ ಕಡೆಗೆ ಅವರು ಬೆಳಕು ಚೆಲ್ಲಿದ್ದಾರೆ. ಆದುದರಿಂದಲೇ ಒಡೆದ ಕನ್ನಡಿ ಎಂದು ಹೆಸರನ್ನು ನೀಡಿದ್ದಾರೆ. ಈ ಕನ್ನಡಿಯ ಚೂರುಗಳನ್ನು ಆಯುವಾಗ ಎಲ್ಲೋ ನಮ್ಮೆದೆಯ ಮೂಲೆಯಲ್ಲಿ ರಕ್ತ ಒಸರಿದಂತಾಗುತ್ತದೆ. ತನ್ನ ಬರವಣಿಗೆ, ಅಭಿವ್ಯಕ್ತಿಯ ಬದ್ಧತೆಗೆ ಮತ್ತು ಹಾಗೂ ಪ್ರಯೋಗಗಳಿಗೆ ಬದುಕನ್ನು ಒತ್ತೆಯಿಟ್ಟ ವಿವಿಧ ಪ್ರತಿಭೆಗಳು ಇಲ್ಲಿದ್ದಾರೆ. ಅವರು ಸಿನೆಮಾ ನಟರಾಗಿರಬಹುದು, ಹೋರಾಟಗಾರರು, ಕ್ರಾಂತಿಕಾರಿಗಳಾಗಿರ ಬಹುದು, ಗೋ ಹಕ್ಕಿಗಾಗಿ ಸಮಾಜದಿಂದ ಬಹಿಷ್ಕಾರ ಗೊಂಡವರಾಗಿರಬಹುದು, ತತ್ವಜ್ಞಾನಿಗಳಾಗಿರಬಹುದು. ಕ್ರಿಸ್ಟೋಫರ್ ಕಾಡ್ವೆಲ್, ಕಾರ್ಲ್‌ಮಾರ್ಕ್ಸ್, ಚಾರ್ಲಿ ಚಾಪ್ಲಿನ್, ಮಾರ್ಕ್ ಟ್ವೇನ್, ಹಿಟ್ಲರ್, ಚೆಕಾಫ್, ಮೊಪಾಸಾ, ವಿಕ್ಟರ್ ಹ್ಯೂಗೋ, ಓ ಹೆನ್ರಿ, ಟಾಲ್‌ಸ್ಟಾಯ್, ಆಸ್ಕರ್ ವೈಲ್ಡ್, ಚಾರ್ಲ್ಸ್ ಡಿಕೆನ್ಸ್... ಹೀಗೆ ವಿಭಿನ್ನ ಕ್ಷೇತ್ರಗಳ ವಿಭಿನ್ನ ವ್ಯಕ್ತಿತ್ವಗಳನ್ನು ಸರಳ, ಕುತೂಹಲಕರವಾಗಿ ಲೇಖಕರು ನಿರೂಪಿಸಿದ್ದಾರೆ. ತಮ್ಮ ಮನೆಮಾರು, ಹೆಂಡತಿ ಮಕ್ಕಳು ಸಂಸಾರ, ಸಮಾಜ, ಪ್ರಭುತ್ವ, ಕಷ್ಟ, ಸುಖ, ಸಮಸ್ಯೆ, ನೋವು, ಹಿಂಸೆ, ಬಿಕ್ಕಟ್ಟು, ಚಟಗಳು, ಸಾಹಸಗಳು, ಇವುಗಳೊಂದಿಗೆ ಈ ಲೇಖಕರು ನಮ್ಮ ಕಣ್ಣ ಮುಂದೆ ಹೊಸದಾಗಿ ಬಂದು ನಿಲ್ಲುತ್ತಾರೆ. ಇವರು ನಿರ್ಮಿಸಿದ ಕಲೆ, ಸಾಹಿತ್ಯ, ಸಿದ್ಧಾಂತ, ವಿವಿಧ ರೀತಿಯ ಜ್ಞಾನ ಸಂಪತ್ತು, ಸಮಾಜದ ಮೇಲೆ ಬೀರಿದ ಪ್ರಭಾವ, ಅದರಿಂದ ಇವರಿಗೆ ಸಿಕ್ಕಿದ ಪ್ರತಿಫಲ, ಇವೆಲ್ಲವನ್ನೂ ಸಂಕ್ಷಿಪ್ತವಾಗಿ ಕೃತಿಯಲ್ಲಿ ಹೇಳಲಾಗಿದೆ. ಬೆನ್ನುಡಿಯಲ್ಲಿ ಡಾ. ಬಿ. ಎಂ. ಪುಟ್ಟಯ್ಯ ಹೇಳುವಂತೆ ಬರವಣಿಗೆ ಪೂರ್ವಾಗ್ರಹ ಪೀಡಿತವಾಗಿಲ್ಲ. ವೈಭವೀಕರಣವಿಲ್ಲ. ತೆಗಳಿಕೆ, ಮೂದಲಿಕೆ ಇಲ್ಲ. ಅತ್ಯಂತ ಕಡಿಮೆ ಪದಗಳ ಚಿಕ್ಕ ಚಿಕ್ಕ ವಾಕ್ಯಗಳು. ಮನಮುಟ್ಟುವ ನಿರೂಪಣೆ. ಕಣ್ಣಿಗೆ ಕಟ್ಟುವ ಚಿತ್ರಣ. ಲಡಾಯಿ ಪ್ರಕಾಶ ಈ ಕೃತಿಯನ್ನು ಹೊರತಂದಿದೆ. ಪುಟಗಳು 106. ಕೃತಿಯ ಮುಖಬೆಲೆ 80 ರೂ. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News