ಕನ್ನಡಿಗೆ ಹೆದರುತ್ತಿರುವ ಕರಾವಳಿಯ ಕರಾಳ ಮುಖಗಳು!

Update: 2017-09-09 03:47 GMT

ಕರಾವಳಿಯ ಕರಾಳ ಮುಖಗಳು, ತಮ್ಮೆದುರಿರುವ ಕನ್ನಡಿಯ ಮೇಲೆ ಸಿಟ್ಟುಕೊಂಡಿವೆ. ತಮ್ಮ ಮುಖದ ವಿರೂಪವನ್ನು ತಿದ್ದಿಕೊಳ್ಳುವ ಸುಲಭ ಉಪಾಯವೆಂದರೆ ಕನ್ನಡಿಯನ್ನು ಒಡೆದು ಹಾಕುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಮತ್ತು ರಾಜಕಾರಣಿಗಳು ಜೊತೆ ಕೂಡಿ ತೀರ್ಮಾನಿಸಿದಂತಿದೆ. ಅಷ್ಟೇ ಅಲ್ಲ, ತಮ್ಮೆಲ್ಲ ಕುರೂಪಗಳಿಗೂ ಈ ಕನ್ನಡಿಯೇ ಕಾರಣ ಎಂಬ ಆರೋಪವನ್ನು ಹೊರಿಸಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲೇ ಕನ್ನಡಿಯನ್ನು ಒಡೆಯುವ ವಿಫಲ ಸಾಹಸಕ್ಕೆ ಇಳಿದಿದ್ದಾರೆ. ಅದರ ಭಾಗವಾಗಿಯೇ, ಕಳೆದೆರಡು ತಿಂಗಳಲ್ಲಿ ಕಲ್ಲಡ್ಕ, ಬಂಟ್ವಾಳ ಭಾಗದಲ್ಲಿ ನಡೆಯುತ್ತಿರುವ ಕರಾಳ ಸಂಗತಿಗಳನ್ನು, ರಾಜಕೀಯ ನಾಯಕರ ಬೇಜವಾಬ್ದಾರಿಗಳನ್ನು ನಾಡಿಗೆ ತಲುಪಿಸುತ್ತಿದ್ದ ವಾರ್ತಾಭಾರತಿ ಪತ್ರಿಕೆ ಮತ್ತು ವರದಿಗಾರನ ಮೇಲೆ ಸ್ವತಃ ಪೊಲೀಸರೇ ಅತ್ಯುತ್ಸಾಹದಿಂದ ಪ್ರಕರಣ ದಾಖಲಿಸಿದ್ದಾರೆ.

ಕರಾವಳಿಯ ಇತಿಹಾಸದಲ್ಲೇ, ಪೊಲೀಸರು ದಿನ ಪತ್ರಿಕೆಯೊಂದರ ವಿರುದ್ಧ ಸ್ವಯಂ ಆಸಕ್ತಿಯಿಂದ ಪ್ರಕರಣ ದಾಖಲಿಸಿ, ವರದಿಗಾರ ಮತ್ತು ಪತ್ರಿಕೆಯ ಧ್ವನಿಯನ್ನು ಅಡಗಿಸಲು ಹೊರಟಿದ್ದು ಇದೇ ಮೊದಲಿರಬೇಕು. ಜಿಲ್ಲೆಗೆ, ರಾಜ್ಯಕ್ಕೆ ಬೆಂಕಿ ಹಚ್ಚುವ ನಾಯಕರು, ಮೆರವಣಿಗೆಯ ಹೆಸರಿನಲ್ಲಿ ಕಲ್ಲು ತೂರಾಟ ನಡೆಸಿದ ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳ ವಿರುದ್ಧ ಇದೇ ಆಸಕ್ತಿಯನ್ನು ತೋರಿಸಿ, ಅವರನ್ನು ಜೈಲಿಗೆ ತಳ್ಳಲು ಮುಂದಾಗಿದ್ದರೆ ಇಂದು ಕರಾವಳಿಯ ಹೆಸರು ರಾಷ್ಟ್ರ ಮಟ್ಟದಲ್ಲಿ ಈ ರೀತಿ ಕೆಡುತ್ತಿರಲಿಲ್ಲ. ಅದರ ಬದಲಿಗೆ ಕರಾವಳಿಯ ದುಷ್ಕರ್ಮಿಗಳ ಅಟ್ಟಹಾಸವನ್ನು ನಾಡಿಗೆ ತಲುಪಿಸುತ್ತಿರುವ, ಸಂತ್ರಸ್ತ ಜನರ ಧ್ವನಿಯನ್ನು ಜನರೆಡೆಗೆ ಮುಟ್ಟಿಸುತ್ತಿರುವ ವರದಿಗಾರನನ್ನು ಅತ್ಯುತ್ಸಾಹದಿಂದ ಬಂಧಿಸಿ, ಆತನಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿ, ಆತನ ನೈತಿಕ ಸ್ಥೈರ್ಯ ಕುಂದಿಸುವುದೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಅವರು ತಿಳಿದುಕೊಂಡಂತಿದೆ. ಕರಾವಳಿಯ ಭವಿಷ್ಯ ಅದೆಂತಹ ಆತಂಕದಲ್ಲಿದೆ ಎನ್ನುವುದಕ್ಕೆ ಪೊಲೀಸರ ಈ ವರ್ತನೆಗಳೇ ಸಾಕ್ಷಿಯಾಗಿವೆ.

ಸಂಸದರೊಬ್ಬರು ಪೊಲೀಸ್ ಠಾಣೆಯ ಮುಂದೆಯೇ ಬಹಿರಂಗವಾಗಿ ‘‘ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುವುದು ನಮಗೆ ಗೊತ್ತಿದೆ’’ ಎಂದು ಹೇಳಿದ ದಿನದಿಂದ, ದಕ್ಷಿಣ ಕನ್ನಡದಲ್ಲಿ ಸಣ್ಣ ಸಣ್ಣ ಹಿಂಸೆಯ ಕಿಡಿಗಳು ಸ್ಫೋಟಗೊಳ್ಳುತ್ತಲೇ ಇವೆ. ಕಲ್ಲಡ್ಕ ಎನ್ನುವ ಊರು, ಈ ಕಿಡಿಗಳನ್ನು ತಯಾರಿಸುವ ಕುಲುಮೆಯಾಗಿ ಕೆಲಸ ಮಾಡುತ್ತಿದೆ. ಒಂದು ಚೂರಿ ಇರಿತ ಪ್ರಕರಣ, ಅಂತಿಮವಾಗಿ ಕಲ್ಲುತೂರಾಟಗಳಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಪತ್ರಿಕೆ ಗಮನ ಸೆಳೆದಿತ್ತು. ಹಾಗೆಯೇ ಸಾರ್ವಜನಿಕರ ನೋವು, ಹತಾಶೆ, ಅಸಹಾಯಕತೆಗಳಿಗೂ ಪತ್ರಿಕೆ ವೇದಿಕೆಯಾಗಿತ್ತು. ಹೇಗೆ ಕಲ್ಲಡ್ಕದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಅಲ್ಲಿನ ಉಸ್ತುವಾರಿ ಸಚಿವರು, ಪೊಲೀಸ್ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎನ್ನುವುದನ್ನು ಬೇರೆ ಬೇರೆ ಸಾರ್ವಜನಿಕರ ಅಭಿಪ್ರಾಯಗಳ ಮೂಲಕ ಸರಕಾರಕ್ಕೆ ತಲುಪಿಸಿತ್ತು. ಪೊಲೀಸರ ಈ ವೈಫಲ್ಯಗಳು ಅಂತಿಮವಾಗಿ ಅಶ್ರಫ್ ಎನ್ನುವ ಆಟೋ ಚಾಲಕನ ಕೊಲೆಯಲ್ಲಿ ಮುಕ್ತಾಯವಾಯಿತು.

ಇಲ್ಲಿಗೆ ಕಲ್ಲಡ್ಕದ ಜೊತೆಗೆ ಇಡೀ ಮಂಗಳೂರು ಒಳಗೊಳಗೆ ಕುದಿಯ ತೊಡಗಿತು. ಪೊಲೀಸರು ಪ್ರಕರಣದ ಗಂಭೀರತೆಯನ್ನು ಅರಿತುಕೊಂಡು ಗಂಭೀರ ತನಿಖೆ ನಡೆಸಿದರು. ಕೆಲವೇ ದಿನಗಳಲ್ಲಿ ಆರೋಪಿಗಳು ಪತ್ತೆಯಾದರು. ಪ್ರಮುಖ ಆರೋಪಿಯೊಬ್ಬ ಕಲ್ಲಡ್ಕ ಪ್ರಭಾಕರ ಭಟ್ಟ ಎಂಬ ಸಂಘಪರಿವಾದ ಮುಖಂಡನ ಜೊತೆಗೆ ವೇದಿಕೆ ಹಂಚಿಕೊಂಡಿರುವುದೂ ಪತ್ರಿಕೆಯ ಮೂಲಕ ಬಹಿರಂಗವಾಯಿತು. ಇದಾದ ಕೆಲವೇ ದಿನಗಳಲ್ಲಿ ಶರತ್ ಮಡಿವಾಳ ಎಂಬ ತರುಣನ ಬರ್ಬರ ಹತ್ಯೆಯಾಯಿತು. ಈ ಹತ್ಯೆಯ ಕುರಿತಂತೆಯೂ ನಿರಂತರ ಸುದ್ದಿಗಳನ್ನು ಪತ್ರಿಕೆ ಪ್ರಕಟ ಮಾಡುತ್ತಾ ಬಂತು. ಯಾವುದೇ ಪಕ್ಷಪಾತ ಮಾಡದೆ, ಎಲ್ಲ ಆಯಾಮಗಳಲ್ಲಿ ಈ ಘಟನೆಯನ್ನು ಸರಕಾರಕ್ಕೂ, ಜನರಿಗೂ ತಲುಪಿಸಿತ್ತು. ರಕ್ತ ಹರಿಸುವವರಿಗೆ, ಕೊಲೆ ನಡೆಸುವವರಿಗೆ ಧರ್ಮವಿಲ್ಲ. ಕೊಲೆ ನಡೆಸಿದವರು ಯಾವ ಧರ್ಮಕ್ಕೆ ಸೇರಿದವರಾಗಿದ್ದರೂ ಅವರನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ ಹೆಗ್ಗಳಿಕೆ ಮತ್ತು ಹೆಮ್ಮೆ ವಾರ್ತಾಭಾರತಿ ಪತ್ರಿಕೆಗಿದೆ. ಮತ್ತು ಇದನ್ನು ಶತಾಯಗತಾಯ ಮುಂದುವರಿಸುತ್ತದೆ.

ಕೊಲೆಗೀಡಾದ ಅಶ್ರಫ್ ಮತ್ತು ಶರತ್ ನಡುವೆ ಯಾವ ವ್ಯತ್ಯಾಸವನ್ನೂ ಕಾಣದೆ ಘಟನೆಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುತ್ತಾ ಬಂದಿದ್ದೇವೆ ಮತ್ತು ಮುಂದೆಯೂ ಮಾಡಲಿದ್ದೇವೆ. ಇದೇ ಸಂದರ್ಭದಲ್ಲಿ ತನಿಖೆಯ ನೆಪದಲ್ಲಿ ಕೆಲವು ಪೊಲೀಸರು ಪಕ್ಷಪಾತವೆಸಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದಾಗ, ಅವರ ಧ್ವನಿಯಾಗಿಯೂ ಪತ್ರಿಕೆ ಸಮರ್ಥವಾಗಿ ಕೆಲಸ ಮಾಡಿದೆ. ಯಾವುದೇ ಮಾಧ್ಯಮದ ಕೆಲಸ ಸಂತ್ರಸ್ತರ, ನೊಂದ ಸಾರ್ವಜನಿಕರ ಧ್ವನಿಯಾಗುವುದಾಗಿದೆ. ಜೊತೆಗೆ, ಸತ್ಯಕ್ಕೆ, ವಸ್ತುನಿಷ್ಠವಾದ ಮಾಹಿತಿಗಳಿಗೆ ಬದ್ಧವಾಗಿರುವುದು. ಇದೇ ಸಂದರ್ಭದಲ್ಲಿ ಪೊಲೀಸರು ನೀಡಿರುವ ಎಲ್ಲ ಹೇಳಿಕೆಗಳನ್ನೂ, ಸ್ಪಷ್ಟೀಕರಣಗಳನ್ನೂ ಅದ್ಯತೆಯಿಂದ ಪತ್ರಿಕೆ ಪ್ರಕಟಿಸುತ್ತಾ ಬಂದಿದೆ. ಪೊಲೀಸರ ವಿರುದ್ಧ ಸಾರ್ವಜನಿಕ ಅಳಲನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಕ್ಷಣ ಅದು ‘ಕೋಮು ಪ್ರಚೋದನೆ’ಯಾಗುತ್ತದೆ ಎಂದು ಯಾಕೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಭಾವಿಸಬೇಕು? ತಮ್ಮನ್ನು ತಾವು ಅವರು ಯಾವುದಾದರೂ ಒಂದು ಕೋಮಿಗೆ ಸೀಮಿತಗೊಳಿಸಿಕೊಂಡಿದ್ದಾರೆಯೆ? ಪತ್ರಿಕೆಯಂತೂ ಅವರನ್ನು ‘ಖಾಕೀ ಧರ್ಮೀಯರಾಗಿ’ ಗುರುತಿಸಿದೆಯೇ ಹೊರತು, ಅವರ ಬಟ್ಟೆಯಲ್ಲಿ ಜಾತಿ ಧರ್ಮಗಳನ್ನು ಗುರುತಿಸಿಲ್ಲ. ಆದುದರಿಂದ ಪೊಲೀಸರ ವಿರುದ್ಧದ ಆರೋಪಗಳನ್ನು ಪ್ರಕಟಿಸಿದಾಕ್ಷಣ ಅದರಿಂದ ಕೋಮು ಪ್ರಚೋದನೆಯಾಗುತ್ತದೆ ಎನ್ನುವ ಪೊಲೀಸರ ಆರೋಪವೇ ಅವರ ಪೂರ್ವಾಗ್ರಹ ಮನಸ್ಥಿತಿಯನ್ನು ಹೇಳುತ್ತದೆ.

ಇತ್ತೀಚೆಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಓರ್ವ ಆರೋಪಿಯ ಮನೆಗೆ ಪೊಲೀಸರು ನುಗ್ಗಿದ್ದರು. ‘‘ಪೊಲೀಸರು ನಮ್ಮ್ಮ ಮನೆಗೆ ನುಗ್ಗಿ ದಾಂಧಲೆ ಎಸಗಿದ್ದಾರೆ, ಧಾರ್ಮಿಕ ಗ್ರಂಥಗಳನ್ನು ಎಸೆದಿದ್ದಾರೆ’’ ಎಂದು ದಾಳಿ ನಡೆದಿರುವ ಮನೆಯ ಮಹಿಳೆಯರು ಆರೋಪಿಸಿದ್ದರು. ಮತ್ತು ಆ ಮಹಿಳೆಯರ ಆರೋಪಗಳನ್ನು ಪರಿಶೀಲಿಸಿ ಪತ್ರಿಕೆಗಳಲ್ಲಿ ವರದಿ ಮಾಡುವುದು ಪತ್ರಿಕಾ ಧರ್ಮ. ಅಂತೆಯೇ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದೇ ಸಂದರ್ಭದಲ್ಲಿ ಈ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರು ನೀಡಿರುವ ನಿರಾಕರಣೆಯ ಹೇಳಿಕೆಯನ್ನೂ ಅಷ್ಟೇ ಪ್ರಾಮುಖ್ಯತೆಯೊಂದಿಗೆ ಪತ್ರಿಕೆ ಪ್ರಕಟಿಸಿತ್ತು. ಆದರೆ ಈ ವರದಿ ಬಂದ ಕೆಲವೇ ದಿನಗಳಲ್ಲಿ ಪೊಲೀಸ್ ಇಲಾಖೆ, ಸಂಬಂಧ ಪಟ್ಟ ಆರೋಪಿಗಳನ್ನು ವಿಚಾರಿಸುವ ಬದಲು, ವರದಿ ಪ್ರಕಟಿಸಿದ ಪತ್ರಿಕೆಯ ಬಾಯಿಯನ್ನೇ ಮುಚ್ಚಿಸಲು ಹೊರಟಿದೆ. ಯಾವುದೇ ನೋಟಿಸನ್ನು ನೀಡದೆ, ಏಕಾಏಕಿ ಸಂಜೆ ಏಳು ಗಂಟೆಯ ಹೊತ್ತಿಗೆ ವರದಿಗಾರನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದದ್ದಲ್ಲದೆ, ಇಡೀ ರಾತ್ರಿ ವಿಚಾರಣೆಯ ಹೆಸರಲ್ಲಿ ಆತನಿಗೆ ದೌರ್ಜನ್ಯವನ್ನು ಮಾಡಿದೆ. ಇದೀಗ ಪ್ರಕರಣ ನ್ಯಾಯಾಲಯದ ಮುಂದಿದೆ. ವರದಿಗಾರ ಜನಸಮೂಹದ ಧ್ವನಿಯಾದ ಒಂದೇ ತಪ್ಪಿಗೆ ಜೈಲು ಕಂಬಿಗಳ ನಡುವೆ, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ಈ ಮೂಲಕ ಪೊಲೀಸರು ಮಾಧ್ಯಮಗಳಿಗೆ ಯಾವ ಸೂಚನೆಗಳನ್ನು ನೀಡುತ್ತಿದ್ದಾರೆ? ಜನಸಾಮಾನ್ಯರ ಅಭಿಪ್ರಾಯಗಳನ್ನು ಪೊಲೀಸರ ಅನುಮತಿಯಿಲ್ಲದೇ ಪ್ರಕಟಿಸಬಾರದು ಎನ್ನುವುದು ಅವರ ಅಭಿಪ್ರಾಯವೇ? ಪೊಲೀಸರಿಂದ ಸೆನ್ಸಾರ್ ಆದ ಬಳಿಕವೇ ಎಲ್ಲ ವರದಿಗಳನ್ನು ಪತ್ರಿಕೆಗಳು ಪ್ರಕಟ ಮಾಡಬೇಕೆ? ಶ್ರೀಸಾಮಾನ್ಯನಿಗೆ ತನ್ನ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಳ್ಳುವ ಸರ್ವ ಹಕ್ಕುಗಳನ್ನು ಪೊಲೀಸರು ನಿರಾಕರಿಸುತ್ತಿದ್ದಾರೆಯೆ? ತಮ್ಮ ಇಲಾಖೆಯೊಳಗಿರುವ ವೈಫಲ್ಯಗಳನ್ನು, ದೌರ್ಬಲ್ಯಗಳನ್ನು ಮುಚ್ಚಿ ಹಾಕಿ, ಅವುಗಳನ್ನು ಎತ್ತಿ ತೋರಿಸಿದ ಪತ್ರಿಕೆಗಳ ಬಗ್ಗೆಯೇ ಮೊಕದ್ದಮೆ ದಾಖಲಿಸಿ ಪತ್ರಕರ್ತರನ್ನು ಬಂಧಿಸುವ ಮೂಲಕ ಕರಾವಳಿಯಲ್ಲಿ ಶಾಂತಿಯನ್ನು ಸ್ಥಾಪಿಸಲು ಪೊಲೀಸರು ಹೊರಟಿದ್ದಾರೆ? ಇಂತಹ ಪ್ರಶ್ನೆಗಳನ್ನು ಇಂದು ಶ್ರೀಸಾಮಾನ್ಯ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ವರದಿಗಾರನ ಬಂಧನ ಅಭಿವ್ಯಕ್ತಿ ಸ್ವಾತಂತ್ರದ ಕಗ್ಗೊಲೆಯಾಗಿದೆ. ಪೊಲೀಸರ ನೇತೃತ್ವದಲ್ಲೇ ಇದು ನಡೆದಿರುವುದು ಪ್ರಜಾಸತ್ತೆಯ ಅಣಕ. ನಿಜವಾಗಿ, ಪೊಲೀಸರು ರಾತ್ರೋರಾತ್ರಿ ಬಂಧಿಸಿರುವುದು ಈ ದೇಶದ ಸಂವಿಧಾನ ನೀಡಿರುವ ಹಕ್ಕುಗಳನ್ನಾಗಿದೆ. ಇದನ್ನು ಮೌನವಾಗಿ ನೋಡುತ್ತಾ ಪೊಲೀಸರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜಕೀಯ ಮುಖಂಡರು, ಕರಾವಳಿಯ ಇಂದಿನ ಸನ್ನಿವೇಶಕ್ಕೆ ನಿಜವಾದ ಕಾರಣರು ಯಾರು ಎನ್ನುವುದನ್ನು ನಾಡಿಗೆ ಬಹಿರಂಗಪಡಿಸಿದ್ದಾರೆ. ಆದರೆ ಕರಾವಳಿಯ ಪೊಲೀಸರು ಒಂದನ್ನು ಅರ್ಥಮಾಡಿಕೊಳ್ಳಬೇಕು. ಜನರನ್ನು ಕಾಯಲು ಬಳಸಬೇಕಾದ ಕಾನೂನನ್ನು ದುರುಪಯೋಗಗೊಳಿಸಿ ಅಭಿವ್ಯಕ್ತಿ ಸ್ವಾತಂತ್ರವನ್ನು ಬೆದರಿಸಿ ಅದರ ಬಾಯಿ ಮುಚ್ಚಿಸುವುದಕ್ಕೆ ಸಾಧ್ಯವಿಲ್ಲ, ಕನ್ನಡಿಯನ್ನು ಒಡೆದು ಹಾಕಿದಾಕ್ಷಣ ಮುಖದ ವಿರೂಪವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News