ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರ ಬಿಡ್ಡಿಂಗ್ ಸಿಸ್ಟಂ ಅನುಸರಿಸುವ ಚಿಂತನೆ ನಡೆಸಿದೆ : ಕಾಗೋಡು ತಿಮ್ಮಪ್ಪ

Update: 2017-09-12 11:36 GMT

ಸಾಗರ,ಸೆ.12 : ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರ ಬಿಡ್ಡಿಂಗ್ ಸಿಸ್ಟಂ ಅನುಸರಿಸುವ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. 

ತಾಲ್ಲೂಕಿನ ತಡಗಳಲೆಯಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ ವತಿಯಿಂದ ನಿರ್ಮಿಸಿರುವ ನೂತನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. 

ತಜ್ಞ ವೈದ್ಯರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತಜ್ಞತೆಯನ್ನು ಮಾನದಂಡವಾಗಿ ಇರಿಸಿಕೊಂಡು ಕರ್ತವ್ಯ ನಿರ್ವಹಿಸಲು ಬರುವ ವೈದ್ಯರಿಗೆ ಸರ್ಕಾರ ಅವರು ಕೇಳಿದಷ್ಟು ವೇತನ ಪಾವತಿ ಮಾಡಲಿದೆ. ಈ ಯೋಜನೆ ಯಶಸ್ವಿಯಾಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಇದರ ಜೊತೆಗೆ ಗ್ರಾಮೀಣ ಭಾಗಕ್ಕೆ ವೈದ್ಯರನ್ನು ಸೆಳೆಯುವ ನಿಟ್ಟಿನಲ್ಲಿ ಸಹ ಗಮನ ಹರಿಸಲಾಗಿದೆ ಎಂದರು. 

ರಾಜ್ಯ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿದೆ. ಹೊಸ ಆಸ್ಪತ್ರೆಗಳ ನಿರ್ಮಾಣ, ರಿಪೇರಿಯಂತಹ ಕೆಲಸಕ್ಕೆ ಅನುದಾನದ ಕೊರತೆ ಇಲ್ಲ. ಕಳೆದ ವರ್ಷ ಉಳ್ಳೂರಿನಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಈಗ ತಡಗಳಲೆಯಲ್ಲಿ ಜನರ ಅಪೇಕ್ಷೆಯಂತೆ ರೂ. 1.06 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಇದರ ಜೊತೆಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸಿಯು ಘಟಕ ಹಾಗೂ ಜನೌಷಧಿ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಧು ಬಂಗಾರಪ್ಪ ಈ ಭಾಗದಲ್ಲಿ 9ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಇಷ್ಟು ದಿನ ಆರೋಗ್ಯ ಸೇವೆಗಾಗಿ ತಾಳಗುಪ್ಪ, ಶಿರವಂತೆ ಅಥವಾ ಸಾಗರಕ್ಕೆ ಹೋಗಬೇಕಾಗಿತ್ತು. ತಡಗಳಲೆಯಲ್ಲಿ ಆಸ್ಪತ್ರೆ ನಿರ್ಮಾಣವಾಗಿರುವುದು ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ತುರ್ತು ಚಿಕಿತ್ಸೆಗೆ ಸಹಾಯವಾಗಿದೆ. ಆಸ್ಪತ್ರೆಗೆ ಬೇಕಾದ ವೈದ್ಯಸಿಬ್ಬಂದಿಗಳು ಸಹ ನೇಮಕವಾಗಿದ್ದು, ಜನರು ಇದರ ಉಪಯೋಗವನ್ನು ಪಡೆಯಬೇಕು ಎಂದರು. 

ವೇದಿಕೆಯಲ್ಲಿ ಸೈದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ರಾಮಪ್ಪ, ಸದಸ್ಯೆ ಲಕ್ಷ್ಮಮ್ಮ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಪರಶುರಾಮ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ ಬರದವಳ್ಳಿ, ಸದಸ್ಯ ದೇವೇಂದ್ರಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ ಗಾಳಿಪುರ ಇನ್ನಿತರರು ಹಾಜರಿದ್ದರು. ನೇತ್ರಾವತಿ ಪ್ರಾರ್ಥಿಸಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾಬಲೇಶ್ವರ ಜೆ. ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ವಂದಿಸಿದರು. ಡಾ. ಕೆ.ಪಿ.ಅಚ್ಚುತ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News