ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ

Update: 2017-09-12 18:46 GMT

 ಪ್ರೊ. ಕೆ. ಮುರಳಿ ಮನೋಹರ್ ಮಹಾತ್ಮ ಜ್ಯೋತಿಬಾ ಫುಲೆ ಹಿಂದುಳಿದ ಜಾತಿಗಳ ಅಭಿವೃದ್ಧಿ ಸಬಲೀಕರಣ ಸಂಸ್ಥೆಯ ಸ್ಥಾಪಕರು. ದಲಿತರ ಶೋಷಣೆಯ ವಿರುದ್ಧ ಧ್ವನಿಯೆತ್ತುವುದರ ಜೊತೆ ಜೊತೆಗೇ ಅವರ ಸಬಲೀಕರಣದ ಮಾರ್ಗಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ಇವರು ಕೆಲಸ ಮಾಡಿದ್ದಾರೆ. ‘ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ’ ಈ ನಿಟ್ಟಿನಲ್ಲಿ ಪ್ರೊ. ಕೆ. ಮುರಳಿ ಮನೋಹರ್ ಬರೆದ ಕೃತಿಯಾಗಿದೆ. ಬಿ. ಸುಜ್ಞಾನ ಮೂರ್ತಿಯವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಹೈದರಾಬಾದಿನ ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ ವಿಶೇಷ ಉಪನ್ಯಾಸದ ಕನ್ನಡ ಅನುವಾದವಿದು. ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣಕ್ಕೆ ನಮ್ಮ ಸಮಾಜದಲ್ಲಿರುವ ಜಾತಿಗಳು, ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ರಾಜಕೀಯ ಅಧಿಕಾರ ವ್ಯವಸ್ಥೆ, ಆಡಳಿತ ನ್ಯಾಯವ್ಯವಸ್ಥೆಯ ರಚನೆ, ಸಮೂಹ ಮಾಧ್ಯಮಗಳ ವ್ಯವಸ್ಥೆಯಲ್ಲಿರುವ ಭ್ರಷ್ಟ ನೀತಿಯೇ ಕಾರಣವೆಂದು ಲೇಖಕರು ಆಂಧ್ರಪ್ರದೇಶದ ಉದಾಹರಣೆಗಳನ್ನು ಅನುಲಕ್ಷಿಸಿ ವಿಶ್ಲೇಷಿಸಿದ್ದಾರೆ. ಇದಕ್ಕಾಗಿ ಅವರು ನೀಡಿರುವ ಅಂಕಿಗಳು ಮಹತ್ವಪೂರ್ಣವಾಗಿವೆೆ. ಸಮಾಜದಲ್ಲಿರುವ ಅನೇಕ ಜಾಡ್ಯಗಳನ್ನು, ಸೃಷ್ಟಿಸಲಾಗಿರುವ ಮೇಲುಕೀಳನ್ನು ನಿವಾರಿಸುವುದಕ್ಕೆ, ಅಮಾನುಷವಾದ ಅಸ್ಪಶ್ಯತೆಯನ್ನು ನಿರ್ಮೂಲನೆ ಮಾಡಿ ಎಲ್ಲರೂ ಸಂಪೂರ್ಣ ಮಾನವರಾಗಿ ಜೀವಿಸುವುದಕ್ಕೆ ಅವಕಾಶವುಳ್ಳ ಹೊಸ ಸಮಾಜ ರಚನೆಗಳೇ ಅಂಬೇಡ್ಕರ್ ನಿರ್ದೇಶನ ಮಾಡಿದ್ದರೂ ಅದರ ಅನುಷ್ಠಾನದಲ್ಲಿ ವಿಫಲವಾಗುತ್ತಿರುವುದಕ್ಕೆ ಕಾರಣಗಳೇನು ಎನ್ನುವುದರ ಬಗ್ಗೆ ಲೇಖಕರು ಗಮನ ಸೆಳೆದಿದ್ದಾರೆ. ಸಾಮಾಜಿಕ ಸಬಲೀಕರಣ ಎಂಬುದು ಇಂದಿಗೂ ಈ ದೇಶದಲ್ಲಿ ಎಟಕದ ಹಣ್ಣಾಗಿ ಏಕಿದೆಯೆಂದು, ಅದರ ಸಾಧನೆಯಲ್ಲಿ ಎಂತಹ ತೊಡಕುಗಳಿವೆಯೆಂದು, ಅವನ್ನು ನಿವಾರಿಸುವುದಕ್ಕೆ ಅಂಬೇಡ್ಕರ್ ಸೂಚಿಸಿದಂತೆ ಸೂಕ್ತಕ್ರಮ ಕೈಗೊಳ್ಳುವುದಕ್ಕೆ ಜನರೆಲ್ಲ ಏಕೆ ಮುಂದಕ್ಕೆ ಬರಬೇಕು ಎನ್ನುವುದನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.

ಲಡಾಯಿ ಪ್ರಕಾಶ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು, 72. ಮುಖಬೆಲೆ 60 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News